ಬಿಸಿಬಿ ಅಕಾಡೆಮಿಗೆ ಜಾಫರ್ ಕೋಚ್

ಮುಂಬೈ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಢಾಕಾದಲ್ಲಿರುವ ಹೈ ಪರ್ಫಾರ್ವೆನ್ಸ್ ಅಕಾಡೆಮಿಗೆ ಭಾರತದ ದೇಶೀಯ ಕ್ರಿಕೆಟ್​ನ ದಿಗ್ಗಜ ಆಟಗಾರ ಮುಂಬೈನ ವಾಸಿಂ ಜಾಫರ್​ರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಭಾರತದ ಪರವಾಗಿ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯವಾಡಿರುವ ಜಾಫರ್, ವರ್ಷದಲ್ಲಿ ಆರು ತಿಂಗಳು ಅಕಾಡೆಮಿಯಲ್ಲಿ ಇರಲಿದ್ದು, ಬಾಂಗ್ಲಾದೇಶದ ಬ್ಯಾಟ್ಸ್​ಮನ್​ಗಳಿಗೆ ನೆರವಾಗಲಿದ್ದಾರೆ.

ಸ್ವತಃ ಬಿಸಿಬಿಯಿಂದ ಆಹ್ವಾನ ಬಂದ ಕಾರಣ 41 ವರ್ಷದ ಜಾಫರ್ ಈ ಹುದ್ದೆ ವಹಿಸಿಕೊಂಡಿದ್ದಾರೆ. ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಅಭಹಾನಿ ಲಿಮಿಟೆಡ್ ಪರವಾಗಿ ಆಡುವ ಸಲುವಾಗಿ ಕೆಲ ವಾರಗಳ ಹಿಂದೆ ಜಾಫರ್ ಬಾಂಗ್ಲಾದೇಶಕ್ಕೆ ತೆರಳಿದ್ದರು. ಈ ವೇಳೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ನೆಟ್ಸ್​ನಲ್ಲಿ ಜಾಫರ್​ರ ಆಟವನ್ನು ನೋಡಿ ಅವರಿಗೆ ಈ ಹುದ್ದೆಯ ಅವಕಾಶ ನೀಡಿದ್ದಾರೆ. ಜಾಫರ್​ರೊಂದಿಗೆ ಕೆಲ ನೆಟ್ಸ್​ನಲ್ಲಿ ಭಾಗಿಯಾಗಿದ್ದ ಸೌಮ್ಯ ಸರ್ಕಾರ್, ಬಾಂಗ್ಲಾದ ಅಗ್ರ ಏಕದಿನ ಟೂರ್ನಿ ಡಿಪಿಎಲ್​ನಲ್ಲಿ ದ್ವಿಶತಕ ಬಾರಿಸಿದ್ದರು.-ಪಿಟಿಐ