ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಇದೇ ಮೊದಲ ಬಾರಿಗೆ ನಡೆದ ಕೊಡಗು ಪೊಲೀಸ್ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ವಿರಾಜಪೇಟೆ ಉಪ ವಿಭಾಗದ ವಿಎಸ್‌ಡಿ ವಿಕ್ಟರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
೫ ಓವರ್‌ನ ಲೀಗ್ ಮಾದರಿಯ ಪಂದ್ಯಾಟದಲ್ಲಿ ಮಡಿಕೇರಿ ಉಪ ವಿಭಾಗದ ಎಂಎಸ್‌ಡಿ ಮಾಸ್ಟರ್ ಕಾಪ್ಸ್, ಸೋಮವಾರಪೇಟೆ ಉಪ ವಿಭಾಗದ ಎಸ್‌ಎಸ್‌ಡಿ ಸೂಪರ್ ಕಾಪ್ಸ್, ಕೊಡಗು ಜಿಲ್ಲಾ ಪೊಲೀಸ್ ಕಚೇರಿಯ ಡಿಪಿಒ ಡೈನಾಮಿಕ್ ಕಾಪ್ಸ್, ವಿರಾಜಪೇಟೆ ಉಪ ವಿಭಾಗದ ವಿಎಸ್‌ಡಿ ವಿಕ್ಟರಿ ಕಾಪ್, ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಆರ್ ಡೇರಿಂಗ್ ಕಾಪ್ಸ್ ತಂಡಗಳು ಸೆಣಸಾಟ ನಡೆಸಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ವಿಎಸ್‌ಡಿ ವಿಕ್ಟರಿ ಕಾಪ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೪ ವಿಕೆಟ್ ಕಳೆದುಕೊಂಡು ೮೪ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಡಿಪಿಒ ಡೈನಾಮಿಕ್ ಕಾಪ್ಸ್ ತಂಡ ತಂಡ ೫ ವಿಕೆಟ್ ಕಳೆದುಕೊಂಡು ೫೯ರನ್ ದಾಖಲಿಸಲು ಶಕ್ತವಾಗಿ, ೨೫ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಈ ಹಿನ್ನೆಲೆ ವಿಎಸ್‌ಡಿ ವಿಕ್ಟರಿ ಕಾಪ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಡಿಪಿಒ ಡೈನಾಮಿಕ್ ಕಾಪ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.
ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡಿಪಿಒ ಡೈನಾಮಿಕ್ ಕಾಪ್ಸ್ ತಂಡ ನಿಗದಿತ ೫ ಓವರ್‌ನಲ್ಲಿ ೫ ವಿಕೆಟ್ ನಷ್ಟಕ್ಕೆ ೬೦ ರನ್ ದಾಖಲಿಸಿತು. ತಂಡದ ಪರ ರಾಜ ೧೫ ಎಸೆತದಲ್ಲಿ ೪೭ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಎಂಎಸ್‌ಡಿ ಮಾಸ್ಟರ್ ಕಾಪ್ಸ್ ತಂಡ ನಿಗದಿತ ಓವರ್‌ನಲ್ಲಿ ೫ ವಿಕೆಟ್ ನಷ್ಟಕ್ಕೆ ೫೬ ರನ್‌ಗಳಿಸಿ ೪ ರನ್‌ಗಳ ಅಂತರದಲ್ಲಿ ವೀರೋಚಿತ ಸೋಲುಕಂಡಿತು. ತಂಡದ ಪರ ಸ್ವಾಮಿ ೩೧ರನ್ ಕಲೆ ಹಾಕಿದರು.
ವೈಯುಕ್ತಿಕ ಪ್ರಶಸ್ತಿ ವಿವರ: ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಡಿಪಿಒ ಡೈನಾಮಿಕ್ ಕಾಪ್ಸ್ ತಂಡದ ರಾಜಾ ಪಡೆದುಕೊಂಡರು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮತ್ತು ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ವಿಎಸ್‌ಡಿ ವಿಕ್ಟರಿ ಕಾಪ್ಸ್ ತಂಡ ಅನೀಶ್ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿ ಮತ್ತು ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಡಿಪಿಒ ಡೈನಾಮಿಕ್ ಕಾಪ್ಸ್ ತಂಡದ ಪ್ರವೀಣ್, ಪಡೆದುಕೊಂಡರು.
ಉದ್ಘಾಟನಾ ಸಮಾರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕ್ರಿಕೆಟ್ ಲೀಗ್ ಪಂದ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಪೊಲೀಸರು ನಿರಂತರ ಕಾರ್ಯಕ್ರಮಗಳಿಂದ ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಈ ಕ್ರಿಕೆಟ್ ಲೀಗ್‌ನಿಂದ ಕೊಂಚ ಒತ್ತಡ ಕಡಿಮೆಯಾಗಲಿದೆ. ಪಂದ್ಯದಲ್ಲಿ ಗೆಲ್ಲುವುವು ಮಾತ್ರ ಮುಖ್ಯವಲ್ಲ. ಸೋತರೆ ಮಾತ್ರ ಗೆಲ್ಲಲು ಸ್ಪೂರ್ತಿ ಬರುತ್ತದೆ ಎಂದರು.
ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಕೊಲೆ ಮಾಡಿ ಕೊಡಗಿನಲ್ಲಿ ತಂದು ವ್ಯಕ್ತಿಯೊಬ್ಬರನ್ನು ಸುಟ್ಟು ಹಾಕಿರುವ ಪ್ರಕರಣವನ್ನು ಯಾವುದೇ ಕುರುವು ಇಲ್ಲದೆ ಪತ್ತೆಹಚ್ಚುವಲ್ಲಿ ಕೊಡಗು ಪೊಲೀಸ್ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಇದಲ್ಲದೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೈಡ್ರೋ ಗಾಂಜಾ, ದರೋಡೆ ಪ್ರಕರಣ ಸೇರಿದಂತೆ ಹಲವು ವಿಶೇಷ ಪ್ರಕರಣಗಳಲ್ಲಿ ನಮ್ಮ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ಪೊಲೀಸರು ಎಲ್ಲ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಕ್ರಿಕೆಟ್ ಅದ್ಭುತವಾಗಿ ಆಯೋಜನೆ ಮಾಡಿದ್ದಾರೆ. ಈ ಕ್ರೀಡೆಯಲ್ಲಿ ಆರೋಗ್ಯಕರ ಸಂಘರ್ಷ ಇರಬೇಕು ಎಂದು ಹೇಳಿದರು.
ಡಿವೈಎಸ್‌ಪಿ ಮಹೇಶ್ ಮಾತನಾಡಿ, ಪೊಲೀಸರು ಎರಡು ತಿಂಗಳ ಒತ್ತಡ ಅನುಭವಿಸಿದ್ದಾರೆ. ಈ ಕ್ರಿಕೆಟ್ ಪಂದ್ಯದಿಂದ ಅವರಿಗೆ ವಿಶ್ರಾಂತಿಯನ್ನು ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮುಂದೆ ಅದೇ ಜಂಜಾಟ ನಮಗಿದೆ. ಇದು ನಮ್ಮ ಕರ್ತವ್ಯ. ಇದನ್ನು ನಾವು ಇಷ್ಟಪಟ್ಟು ಮಾಡುತ್ತೇವೆ ಎಂದರು.
ಮೋಹನ್ ಕುಮಾರ್, ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕರಾದ ರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಇದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಪ್ರದರ್ಶನ ಪಂದ್ಯ: ಕೊಡಗು ಪೊಲೀಸ್ ೧೧ ಹಾಗೂ ಕೊಡಗು ಮೀಡಿಯಾ ವಾರಿಯರ್ಸ್ ತಂಡದ ನಡುವೆ ನಡೆದ ಮೊದಲ ಪ್ರದರ್ಶನ ಪಂದ್ಯದಲ್ಲಿ ಕೊಡಗು ಪೊಲೀಸ್ ತಂಡ ಜಯ ಸಾಧಿಸಿತು. ಎರಡನೇ ಪ್ರದರ್ಶನ ಪಂದ್ಯದಲ್ಲಿ ಕೊಡಗು ಪ್ರೆಸ್ ರಾಕರ್ಸ್ ತಂಡ ಕೊಡಗು ಪೊಲೀಸ್ ಎ ತಂಡದ ವಿರುದ್ಧ ಜಯ ಸಾಧಿಸಿತು.