ಸೌರಾಷ್ಟ್ರಕ್ಕೆ ಸುಚಿತ್ ಬ್ರೇಕ್

ರಾಜ್​ಕೋಟ್: ತವರು ನೆಲದಲ್ಲಿ ಆಡಿದ ಹಿಂದಿನ 3 ಪಂದ್ಯಗಳಲ್ಲೂ ರನ್​ಹೊಳೆಯನ್ನೇ ಹರಿಸಿದ್ದ ಸೌರಾಷ್ಟ್ರ ಬ್ಯಾಟ್ಸ್​ಮನ್​ಗಳು ಗುರುವಾರ, 8 ಬಾರಿಯ ಚಾಂಪಿಯನ್ ಕರ್ನಾಟಕದ ಎದುರು ರನ್​ಗಾಗಿ ಪರದಾಡಿದರು. ಬ್ಯಾಟಿಂಗ್​ಸ್ನೇಹಿ ಪಿಚ್​ನಲ್ಲೂ ಮಾರಕ ದಾಳಿ ನಡೆಸಿದ ಕರ್ನಾಟಕದ ಆಲ್ರೌಂಡರ್ ಜೆ.ಸುಚಿತ್ (104ಕ್ಕೆ 5) ಆತಿಥೇಯ ತಂಡದ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು. ವಿದಾಯ ಪಂದ್ಯವಾಡುತ್ತಿರುವ ಸೌರಾಷ್ಟ್ರ ನಾಯಕ ಜೈದೇವ್ ಷಾ ಪ್ರತಿರೋಧದ ನಡುವೆ, 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪ್ರವಾಸಿ ಕರ್ನಾಟಕ ತಂಡ ಮೊದಲ ದಿನದ ಗೌರವ ಸಂಪಾದಿಸಿತು.

ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್​ಗೆ ಇಳಿದ ಸೌರಾಷ್ಟ್ರ ತಂಡ, ಮೊದಲ ದಿನದಂತ್ಯಕ್ಕೆ 9 ವಿಕೆಟ್​ಗೆ 288 ರನ್ ಕಲೆಹಾಕಿದೆ. ಜೈದೇವ್ ಷಾ (97 ರನ್, 159 ಎಸೆತ, 9 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ತೋರಿದರೂ, ವಿದಾಯ ಪಂದ್ಯದಲ್ಲಿ ಶತಕ ಸಿಡಿಸುವ ಅವಕಾಶ ಕೈಚೆಲ್ಲಿದರು.

ಜೆ.ಸುಚಿತ್ ದಾಳಿಗೆ ಕುಸಿದ ಸೌರಾಷ್ಟ್ರ: ಅನುಭವಿ ವೇಗಿ ಮಿಥುನ್ ಜತೆಗೂಡಿ ಆರಂಭದ 3 ಓವರ್ ಹಂಚಿಕೊಂಡ ನಾಯಕ ವಿನಯ್ ಕುಮಾರ್, 4ನೇ ಓವರ್​ಗೆ ಸ್ಪಿನ್ ದಾಳಿ ಇಳಿಸಿದರು. ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದ ಮೈಸೂರು ಹುಡುಗ ಸುಚಿತ್, ಇನಿಂಗ್ಸ್​ನ

8ನೇ ಓವರ್​ನಲ್ಲೇ ಆತಿಥೇಯ ತಂಡಕ್ಕೆ ಶಾಕ್ ನೀಡಿದರು. ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ಸ್ನೇಲ್ ಪಟೇಲ್ (22) ಸುಚಿತ್ ಎಸೆತದಲ್ಲಿ ವಿಕೆಟ್ಕೀಪರ್ ಬಿಆರ್ ಶರತ್​ಗೆ ಕ್ಯಾಚ್ ನೀಡಿದರು. ಈ ವೇಳೆಗೆ ಸ್ನೇಲ್ ಪಟೇಲ್ ಮೊದಲ ವಿಕೆಟ್​ಗೆ ಹಾರ್ವಿಕ್ ದೇಸಾಯಿ (26) ಜತೆ ಸೇರಿ 30 ರನ್ ಕಲೆಹಾಕಿದ್ದರು. ಸ್ನೇಲ್ ಔಟಾದ ಬೆನ್ನಲ್ಲೇ 3ನೇ ಕ್ರಮಾಂಕದ ಅವಿ ಬರೊಟ್ (0) ಅವರನ್ನೂ ಖಾತೆ ತೆರೆಯುವ ಮುನ್ನವೇ ಬಲಿ ಪಡೆದರು. ಬಳಿಕ ಬಂದ ಅರ್ಪಿತ್ ವಸವಾಡ (38) ಜತೆಗೂಡಿ ಹಾರ್ವಿಕ್ 3ನೇ ವಿಕೆಟ್​ಗೆ 39 ರನ್ ಕಲೆಹಾಕಿ ಸುಚಿತ್​ಗೆ ವಿಕೆಟ್ ನೀಡಿದರು. ದೇಸಾಯಿ ಔಟಾದ ಬೆನ್ನಲ್ಲೇ ಅನುಭವಿ ಶೆಲ್ಡನ್ ಜಾಕ್ಸನ್ (4) ಸುಚಿತ್ ಎಸೆತದಲ್ಲಿ ನಿಶ್ಚಲ್​ಗೆ ಕ್ಯಾಚ್ ನೀಡಿದರು. ಆರಂಭದ ನಾಲ್ಕು ವಿಕೆಟ್​ಗಳು ಸುಚಿತ್ ಪಾಲಾಗಿದ್ದು ವಿಶೇಷ.

ಶತಕದ ವಿದಾಯ ತಪ್ಪಿಸಿಕೊಂಡ ಜೈದೇವ್

ಸುಚಿತ್ ಮಾರಕ ದಾಳಿಯಿಂದಾಗಿ 119 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ಸೌರಾಷ್ಟ್ರ ತಂಡಕ್ಕೆ ಜೈದೇವ್ ಷಾ ಹಾಗೂ ಪ್ರೇರಕ್ ಮಂಕಡ್ (37) ಜೋಡಿ ಆಸರೆಯಾಯಿತು. ತಾಳ್ಮೆಯಿಂದಲೇ ಕರ್ನಾಟಕದ ಬೌಲರ್​ಗಳನ್ನು ಎದುರಿಸಿದ 35 ವರ್ಷದ ಜೈದೇವ್, ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡವನ್ನು ಪ್ರೇರಕ್ ಜತೆಗೂಡಿ ಮೇಲೆತ್ತಿದರು. ಸೌರಾಷ್ಟ್ರ ಕುಸಿತಕ್ಕೆ ಕಾರಣವಾಗಿದ್ದ ಸುಚಿತ್ ಅವರೇ ಅಂತಿಮವಾಗಿ ಈ ಜೋಡಿಯನ್ನು ಬೇರ್ಪಡಿಸಿದರು. 5ನೇ ವಿಕೆಟ್​ಗೆ ಉಪಯುಕ್ತ 73 ರನ್ ಸೇರಿಸಿದ ಪ್ರೇರಕ್, ಸುಚಿತ್ ಎಸೆತದಲ್ಲಿ ವಿನಯ್ಕುಮಾರ್​ಗೆ ಕ್ಯಾಚ್ ನೀಡಿದರು. ಬಳಿಕ ಬಾಲಂಗೋಚಿಗಳಾದ ಚಿರಾಗ್ ಜಾನಿ (13) ಹಾಗೂ ಕಮಲೇಶ್ ಮಕ್ವಾನ (31*) ಜತೆ ಕೆಲಕಾಲ ಕ್ರೀಸ್​ನಲ್ಲಿ ನಿಂತ ಜೈದೇವ್ ಷಾ ಶತಕದಂಚಿನಲ್ಲಿದ್ದ ವೇಳೆ ಪವನ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು. ದಿನದಾಟದ ಅಂತಿಮ ಹಂತದವರೆಗೂ ಸೌರಾಷ್ಟ್ರ ತಂಡವನ್ನು ಆಲೌಟ್ ಮಾಡಲು ಕರ್ನಾಟಕದ ಬೌಲರ್​ಗಳು ಹರಸಾಹಸಪಟ್ಟರೂ ಯಶ ಕಾಣಲಿಲ್ಲ.

ಸ್ಟಾರ್ ನೇರಪ್ರಸಾರ

ಕರ್ನಾಟಕ-ಸೌರಾಷ್ಟ್ರ ಪಂದ್ಯ ಸ್ಟಾರ್ ಸ್ಪೋರ್ಟ್ಸ್2 ವಾಹಿನಿಯಲ್ಲಿ ನೇರಪ್ರಸಾರ ಕಾಣುತ್ತಿದೆ.

ದಿನದಾಟ ಆರಂಭ: ಬೆಳಗ್ಗೆ 9.30