ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಂಡ್ಯಾ, ರಾಹುಲ್‌ಗೆ ನೋಟಿಸ್‌ ನೀಡಿದ ಬಿಸಿಸಿಐ

ನವದೆಹಲಿ: ಖಾಸಗಿ ಟಿವಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್‌ ಅವರಿಗೆ ಬಿಸಿಸಿಐ ಇದೀಗ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, 24ಗಂಟೆಗಳೊಳಗೆ ವಿವರಣೆ ನೀಡುವಂತೆ ಕೇಳಿದೆ.

ಶೋನಲ್ಲಿ ಸ್ತ್ರೀಯರ ಕುರಿತು ಪಾಂಡ್ಯ ತಮ್ಮ ಸ್ತ್ರೀದ್ವೇಷಿ ಮತ್ತು ಕಾಮಪ್ರಚೋದಕ ಹೇಳಿಕೆ ಕುರಿತು ಕ್ಷಮೆ ಕೇಳಿದ ಕೆಲವೇ ಗಂಟೆಗಳಲ್ಲಿ ನೋಟಿಸ್‌ ಜಾರಿಯಾಗಿದೆ.

ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಕುರಿತು ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಅವರಿಗೆ ನೋಟಿಸ್ ಕಳುಹಿಸಿದ್ದೇವೆ. 24 ಗಂಟೆಗಳ ಕಾಲಾವಕಾಶವನ್ನು ವಿವರಣೆ ನೀಡಲು ಸೂಚಿಸಲಾಗಿದೆ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

ಇದಾದ ಬಳಿಕ ಟ್ವೀಟ್ ಮಾಡಿದ್ದ ಪಾಂಡ್ಯಾ, ನನ್ನ ಹೇಳಿಕೆಯಿಂದ ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ. ಶೋನ ಸ್ವಭಾವಕ್ಕೆ ತಕ್ಕಂತೆ ನಾನು ಮಾತನಾಡಿದ್ದೆ ಬಿಟ್ಟರೆ ಯಾರನ್ನು ಅಗೌರವಿಸುವ ಮತ್ತು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುವ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ. ಎಲ್. ರಾಹುಲ್ ಭಾಗವಹಿಸಿದ್ದರು. ಇದರಲ್ಲಿ ಕರಣ್ ಅವರು ಕೇಳಿದ ಪ್ರಶ್ನೆಗೆ ಪಾಂಡ್ಯ ನೀಡಿದ ಉತ್ತರ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಶೋನಲ್ಲಿ ಕರಣ್ ಅವರು ಪಾಂಡ್ಯ ಬಳಿ ‘ನೀವು ಕ್ಲಬ್​ನಲ್ಲಿ ಹುಡುಗಿಯರ ಹೆಸರು ಯಾಕೆ ಕೇಳುವುದಿಲ್ಲ ಎಂದು ಕೇಳಿದ್ದರು. ಇದಕ್ಕೆ ಪಾಂಡ್ಯ, ನಾನು ಮೊದಲಿಗೆ ಹುಡುಗಿಯರು ಯಾವ ರೀತಿ ವರ್ತಿಸುತ್ತಾರೆಂದು ನೋಡಲು ಇಷ್ಟಪಡುತ್ತೇನೆ ಎಂದಿದ್ದರು. ಇದರ ಜತೆಗೆ ವರ್ಣಬೇಧದ ಮಾತುಗಳನ್ನು ಆಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. (ಏಜೆನ್ಸೀಸ್)