ಕ್ರಿಕೆಟ್ ಬೆಟ್ಟಿಂಗ್ ಐವರ ಬಂಧನ

ಮಂಗಳೂರು: ನಗರದಲ್ಲಿ ಆ್ಯಪ್ ಬಳಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 5 ಮಂದಿಯನ್ನು ನಗರ ಅಪರಾಧ ಪತ್ತೆದಳ(ಸಿಸಿಬಿ) ಪೊಲೀಸರು ಬಂಧಿಸಿ, 54 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಅಡ್ಯಾರ್ ನಿವಾಸಿ ಅಶೋಕ್(40), ಕುಲಶೇಖರ ನಿವಾಸಿ ಉದಯ್(40), ಪಾಂಡೇಶ್ವರ ನಿವಾಸಿ ರವಿ(35), ವಾಮಂಜೂರು ನಿವಾಸಿಗಳಾದ ರಾಧಾಕೃಷ್ಣ(35), ದಿತ್ತು(30) ಬಂಧಿತರು.

ಪ್ರಕರಣ ವಿವರ: ಕರುಣಾಕರ್ ಭಂಡಾರಿ ಎಂಬಾತ ದುಬೈನಲ್ಲಿದ್ದು ಆರೆಂಜ್ 333 ಆ್ಯಪ್ ಮೂಲಕ ಐಪಿಎಲ್, ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ವಾರಕ್ಕೆ ಎರಡರಿಂದ ಮೂರು ಬಾರಿ ನಗರಕ್ಕೆ ಬಂದು ಬೆಟ್ಟಿಂಗ್ ವ್ಯವಹಾರದ ಹಣ ಪಡೆದು ಲೆಕ್ಕಪತ್ರ ಚುಕ್ತಾ ಮಾಡುತ್ತಿದ್ದ. ಈ ದಂಧೆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಂಧೆಯ ರೂವಾರಿ ಕರುಣಾಕರ್ ಭಂಡಾರಿ ಎಂಬಾತನಿಗೆ ನಗರದಲ್ಲಿ ಅಶೋಕ ಪ್ರಮುಖ ಏಜೆಂಟ್ ಆಗಿದ್ದು ಆತನನ್ನು ಆ್ಯಪ್‌ನ ಅಡ್ಮಿನ್ ಆಗಿ ಮಾಡಿದ್ದ. ಅವನ ಮುಖೇನ ದಂಧೆ ನಡೆಸುತ್ತಿದ್ದ. ಇದೇ ಮಾದರಿಯಲ್ಲಿ ಹಲವರನ್ನು ಅಡ್ಮಿನ್‌ಗಳನ್ನು ಮಾಡಿರುವ ಸಾಧ್ಯತೆಯಿದೆ. ಆರೋಪಿಗಳಾದ ಕರುಣಾಕರನ್ ಸಂಬಂಧಿ ರವಿ ಮತ್ತು ಉದಯ್ ಏಜೆಂಟ್‌ಗಳಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದರು.

ಅಶೋಕ್, ರಾಧಾಕೃಷ್ಣ, ದಿತ್ತು ಎಂಬುವರನ್ನು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ 2 ಲಕ್ಷ ರೂ. ವಶಪಡಿಸಿಕೊಂಡರೆ, ಉದಯ್ ಮತ್ತು ರವಿಯನ್ನು ಬಂದರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ 52 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್.ನಾಯ್ಕ, ಪಿಎಸ್‌ಐ ಕಬ್ಬಾಳ್‌ರಾಜ್, ಎಎಸ್‌ಐ ಮೋಹನ್, ಆಶಿತ್, ರಾಜಾ, ಮಣಿ, ವಿಶ್ವನಾಥ್ ಭಾಗವಹಿಸಿದ್ದರು.

ಸಾರ್ವಜನಿಕ ಮಾಹಿತಿ ಆಧಾರದಲ್ಲಿ ದಾಳಿ
ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಬೆಟ್ಟಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಮಾಹಿತಿ ನೀಡುವಂತೆ ಕೋರಿದ್ದರು. ಇದಕ್ಕಾಗಿ ನಂತೂರು, ಅಂಬೇಡ್ಕರ್ ವೃತ್ತಗಳಲ್ಲಿರುವ ಡಿಜಿಟಲ್ ಫಲಕದಲ್ಲಿ ಪೊಲೀಸ್ ಸಾಮಾಜಿಕ ಜಾಲತಾಣ(ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಪ್) ವಿಳಾಸ ನೀಡಿ, ತಮ್ಮ ಪರಿಸರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಹಲವಾರು ದೂರುಗಳು ಇದರಲ್ಲಿ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆಯೂ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಲೆ ಬೀಸಿದ್ದರು. ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ಸ್ಪಂದಿಸಿಲ್ಲ ಎಂದು ಸಾರ್ವಜನಿಕರೊಬ್ಬರು ಆಯುಕ್ತರಿಗೆ ಮಾಡಿದ್ದ ಟ್ವಿಟ್ಟರ್‌ಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ವಿಶ್ವಕಪ್ ಬೆಟ್ಟಿಂಗ್ 5ನೇ ಕಾರ್ಯಾಚರಣೆ
ಸೋಮವಾರ ನಡೆದಿರುವ ಕಾರ್ಯಾಚರಣೆ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಆರಂಭಗೊಂಡ ಬಳಿಕ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವಿರುದ್ದ ನಡೆದಿರುವ 5ನೇ ಕಾರ್ಯಾಚರಣೆಯಾಗಿದೆ. ಇದೇ ವೇಳೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಗರದಲ್ಲಿ ವಶಪಡಿಸಿಕೊಂಡಿರುವ ಬೃಹತ್ ಮೊತ್ತವಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಐಪಿಎಲ್ ಹಾಗೂ ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಸುಮಾರು 45ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಿ 75 ಲಕ್ಷಕ್ಕಿಂತಲೂ ಅಧಿಕ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಮಾಹಿತಿಗಳನ್ನು ನೀಡಬಹದು. ಹೆಸರನ್ನು ಗೌಪ್ಯವಾಗಿಡಲಾಗುವುದು.
– ಸಂದೀಪ್ ಪಾಟೀಲ್, ನಗರ ಪೊಲೀಸ್ ಆಯುಕ್ತರು ಮಂಗಳೂರು

Leave a Reply

Your email address will not be published. Required fields are marked *