ಸಿಆರ್‌ಎಫ್-ಕೆಎನ್‌ಟಿಯಡಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ 2500 ಕೋಟಿ ರೂ. ಅನುದಾನ – ಸಂಸದ ಸಂಗಣ್ಣ ಕರಡಿ ಹೇಳಿಕೆ

ಲಿಂಗಸುಗೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿಪಕ್ಷಗಳು ತೆಗಳಿಕೆಯಲ್ಲಿ ಕಾಲಹರಣ ಮಾಡುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಪಟ್ಟಣ ಸಮೀಪದ ಸರ್ಜಾಪುರದಲ್ಲಿ ರಾಜ್ಯ ಹೆದ್ದಾರಿ-20ರ 7.60 ಕಿಮೀ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಅಭಿವೃದ್ಧಿಗೆ 275 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಭಾಗಶಃ ಕಾಮಗಾರಿ ಪೂರ್ಣಗೊಂಡಿವೆ. ಸಿಆರ್‌ಎಫ್-ಕೆಎನ್‌ಟಿ ಯೋಜನೆಯಡಿ 2500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ದಾಖಲೆಯಾಗಿದೆ ಎಂದರು.

ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳೇ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು. ಜಿಪಂ ಸದಸ್ಯೆ ರೇಣುಕಾ ಚಂದ್ರಶೇಖರ, ಗ್ರಾಪಂ ಅಧ್ಯಕ್ಷೆ ಗೀತಾ, ರಾಜ್ಯ ಹೆದ್ದಾರಿ ಅಧಿಕಾರಿಗಳಾದ ವಿಜಯ ಪಾಟೀಲ್, ಶಿವನಗೌಡ, ಪಿಡಿಒ ಶೋಭಾರಾಣಿ ಸೇರಿದಂತೆ ಇತರರು ಇದ್ದರು.