ಮಂಡ್ಯ: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಅಜಾತಶತ್ರು ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿರುವ ಅವರ ನೆಚ್ಚಿನ ಸ್ಥಳ ‘ಕಾಫಿ ಡೇ’ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸರ್ಕಾರದ ಸಕಲ ಗೌರವದೊಂದಿಗೆ ನೆರವೇರಿತು.
ಮಂಗಳವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದ ಎಸ್ಎಂಕೆ ಅವರ ಪಾರ್ಥಿವ ಶರೀರ ಸ್ವಗ್ರಾಮ ಸೋಮನಹಳ್ಳಿಗೆ ಮೆರವಣಿಗೆಯಲ್ಲಿ ಬರುವ ಹೊತ್ತಿಗೆ ಬುಧವಾರ ಮಧ್ಯಾಹ್ನ ಆಗಿತ್ತು. ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ಮಂಡ್ಯ ಸೇರಿ ಹಲವು ಜಿಲ್ಲೆಯಿಂದ ಸಾವಿರಾರು ಜನ ಆಗಮಿಸಿದ್ದರು. ಎಲ್ಲರಿಗೂ ಅಂತಿಮ ದರ್ಶನ ಮಾಡಿಸಲು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ರಾಜ್ಯ ಸರ್ಕಾರದ ಸಚಿವರು, ವಿವಿಧ ಪಕ್ಷದ ಶಾಸಕರು, ನಾಯಕರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಎಸ್ಎಂಕೆ ಅಂತಿಮ ದರ್ಶನ ಪಡೆದುಕೊಂಡರು. ಮಧ್ಯಾಹ್ನ 3.22ರ ಸುಮಾರಿಗೆ ಪಾರ್ಥಿವ ಶರೀರವನ್ನು ಅಂತಿಮಸಂಸ್ಕಾರ ಸ್ಥಳಕ್ಕೆ ಒಯ್ಯಲಾಯಿತು. ಬಳಿಕ ಸಿಎಂ ಸೇರಿ 30ಕ್ಕೂ ಹೆಚ್ಚು ಗಣ್ಯರು ಗೌರವ ವಂದನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪರವಾಗಿ ಆರ್. ಅಶೋಕ್ ಹೂಗುಚ್ಛ ಅರ್ಪಿಸಿದರು. ನಂತರ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಇನ್ನು ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ಗುರುವಿಗೆ ನಮಿಸಿ ಕಣ್ಣೀರಾದರು. ಅಲ್ಲದೆ ಮೃತದೇಹ ಒಯ್ಯುವಾಗ ಹೆಗಲು ಕೊಟ್ಟರು. ಬಳಿಕ ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಎಸ್ಎಂಕೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಇತ್ತ 10 ಅಡಿ ಅಗಲ ಹಾಗೂ 15 ಅಡಿ ಉದ್ದದ ಚಿತೆ ಮೇಲೆ ಅರಣ್ಯ ಇಲಾಖೆಯಿಂದ ತರಿಸಲಾಗಿದ್ದ ಸುಮಾರು 1 ಟನ್ ತೂಕದ ಗಂಧದ ತುಂಡುಗಳನ್ನಿರಿಸಲಾಗಿತ್ತು. ಧಾರ್ವಿುಕ ವಿಧಿವಿಧಾನ ಪೂರೈಸಿದ ಬಳಿಕ ಕೃಷ್ಣ ಅವರ ಪತ್ನಿ ಪ್ರೇಮಾ ಪತಿಯ ಕೆನ್ನೆ ಸವರಿ ಕಣ್ಣೀರು ಹಾಕುತ್ತಾ ವಿದಾಯ ಹೇಳಿದರು. ಸಂಜೆ 5.25ರ ಸುಮಾರಿಗೆ ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಪ್ರತಿಮೆ ಸ್ಥಾಪನೆಗೆ ಬೇಡಿಕೆ: ಎಸ್.ಎಂ.ಕೃಷ್ಣ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಮಾತ್ರವಲ್ಲದೆ ವಿರೋಧ ಪಕ್ಷದವರನ್ನು ಎಂದೂ ಅನಗತ್ಯವಾಗಿ ಟೀಕಿಸದ ವ್ಯಕ್ತಿತ್ವ ಹೊಂದಿದ್ದರು. ಇಂತಹವರಿಗೆ ಗೌರವ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಎದುರು ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಸೋಮನಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.
ಶೋಕದಲ್ಲೇ ಮಂಡ್ಯದ ಸುಪುತ್ರನಿಗೆ ವಿದಾಯ: ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ ಅವರಿಗೆ ಮಂಡ್ಯ ಜಿಲ್ಲೆಯ ಜನರು ಶೋಕದಲ್ಲಿಯೇ ಅಂತಿಮ ವಿದಾಯ ಹೇಳಿದರು. ನಾಲ್ಕು ಸದನವನ್ನು ಪ್ರತಿನಿಧಿಸಿದ ಜಿಲ್ಲೆಯ ಏಕೈಕ ಪ್ರತಿನಿಧಿ ಎನ್ನುವ ದಾಖಲೆ ಬರೆದಿರುವ ಎಸ್ಎಂಕೆ, ತಮ್ಮ ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರನ್ನು ಬೆಳೆಸಿದ್ದಾರೆ. ಮಾತ್ರವಲ್ಲದೆ, ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ರಾಜಕೀಯವಾಗಿ ಎಷ್ಟೇ ಉನ್ನತ ಸ್ಥಾನ ಅಲಂಕರಿಸಿದ್ದರೂ ಮಂಡ್ಯದೊಂದಿಗಿನ ನಂಟನ್ನು ಕಳೆದುಕೊಂಡಿರಲಿಲ್ಲ. ಈ ಕಾರಣಕ್ಕೆ ಜಿಲ್ಲೆಯ ಜನರಲ್ಲಿ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಿರುವಂಥ ಶೋಕ ವ್ಯಕ್ತವಾಯಿತು. ಬುಧವಾರ ನಿಗದಿತ ಸಮಯಕ್ಕಿಂತ ನಾಲ್ಕು ತಾಸು ತಡವಾಗಿ ಪಾರ್ಥಿವ ಶರೀರವನ್ನು ಸೋಮನಹಳ್ಳಿಗೆ ತಂದರೂ ಅಪಾರ ಸಂಖ್ಯೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಎಸ್ಎಂಕೆ ದರ್ಶನ ಪಡೆದರು. ಇನ್ನು ಇಡೀ ಜಿಲ್ಲಾದ್ಯಂತ, ಅದರಲ್ಲಿಯೂ ಮದ್ದೂರು ಪಟ್ಟಣದಲ್ಲಿ ಕೃಷ್ಣ ಅವರಿಗೆ ಸಂತಾಪ ಸೂಚಿಸುವ ಫ್ಲೆಕ್ಸ್ಗಳು ರಾರಾಜಿಸಿದವು.
ದಾರಿಯುದ್ದಕ್ಕೂ ಅಶ್ರುತರ್ಪಣ: ಎಸ್.ಎಂ.ಕೃಷ್ಣ ಅವರ ಪಾರ್ಥೀವ ಶರೀರವನ್ನು ಹೊತ್ತ ವಾಹನ ಮೆರವಣಿಗೆ ಹೊರಟಾಗ ಬೆಂಗಳೂರಿನ ಜನರು ಅಶ್ರುತರ್ಪಣ ಸಲ್ಲಿಸಿದರು. ಸದಾಶಿವನಗರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದ್ದ ಪಾರ್ಥಿವ ಶರೀರಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಅನುವು ಮಾಡಿಕೊಡಲಾಯಿತು. ಕೃಷ್ಣ ಅವರ ಪತ್ನಿ ಪ್ರೇಮಾ ಮತ್ತು ಕುಟುಂಬ ವರ್ಗದವರು, ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಹಾಜರಿದ್ದು, ಮನೆಯಿಂದ ಭಾವಪೂರ್ಣ ವಿದಾಯ ಅರ್ಪಿಸಿದರು. ಪಾರ್ಥಿವ ಶರೀರ ಹೊತ್ತ ವಾಹನದಲ್ಲಿ ಡಿಕೆಶಿ ಆಸೀನರಾಗಿದ್ದರು. ಮೇಖ್ರಿ ಸರ್ಕ್ಲ್ನಿಂದ ಬಳ್ಳಾರಿ ರಸ್ತೆ, ವಿಂಡ್ಸರ್ವ್ಯಾನರ್, ಚಾಲುಕ್ಯ ವೃತ್ತ, ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಚಾಮರಾಜಪೇಟೆ, ಶಿರಸಿ ಮೇಲ್ಸೇತುವೆ, ಮೈಸೂರು ಸರ್ಕಲ್, ರಾಜಾರಾಜೇಶ್ವರಿ ನಗರ ಸಿಗ್ನಲ್, ಕೆಂಗೇರಿ, ಬಿಡದಿ, ರಾಮನಗರ ತನಕವೂ ಜನರು ರಸ್ತೆ ಇಕ್ಕೆಲಗಳಲ್ಲಿ ನಿಂತು ಪುಷ್ಪವೃಷ್ಟಿಗರೆದು ನಮನ ಸಲ್ಲಿಸಿದರು.
ವ್ಯವಸ್ಥೆ ನೋಡಿಕೊಂಡ ಶಿಷ್ಯಂದಿರು: ಕೃಷ್ಣ ಅವರ ಅಂತಿಮಯಾತ್ರೆ ಸಂಪೂರ್ಣ ಹೊಣೆಯನ್ನು ಅತ್ಯಾಪ್ತ ಶಿಷ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ನೋಡಿಕೊಂಡರು. ಮಂಗಳವಾರ ಸೋಮನಹಳ್ಳಿಯಲ್ಲಿ ಪರಿಶೀಲನೆ ನಡೆಸಿ ಸಕಲ ಸಿದ್ಧತೆಗೆ ಸೂಚನೆ ನೀಡಿದ್ದ ಡಿಕೆಶಿ, ಬುಧವಾರ ಖುದ್ದು ಪಾರ್ಥಿವ ಶರೀರವನ್ನು ಸೋಮನಹಳ್ಳಿಗೆ ತಂದರು. ಅಂತಿಮ ದರ್ಶನದ ಪ್ರಾರಂಭದಲ್ಲಿ ಕೊಂಚ ಗೊಂದಲವಾದಾಗ ಮೈಕ್ ಹಿಡಿದು ವ್ಯವಸ್ಥೆ ಕಡೆ ಗಮನಹರಿಸಿದರು. ಗೌರವ ವಂದನೆ ಸಲ್ಲಿಸುವ ವೇಳೆ ಡಿಕೆಶಿ ಕಣ್ಣೀರು ಹಾಕಿ ನೆಚ್ಚಿನ ಗುರುವಿನ ಕಾಲಿಗೆ ನಮಸ್ಕರಿಸಿ ಅಂತಿಮ ವಿದಾಯ ಹೇಳಿದರು. ಅದೇ ರೀತಿ ಎಸ್ಎಂಕೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಂಎಲ್ಸಿ ದಿನೇಶ್ ಗೂಳಿಗೌಡ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಸೇರಿ ಹಲವರು ಸ್ಥಳ ಬಿಟ್ಟು ಕದಲಲಿಲ್ಲ.
ಮದ್ದೂರಲ್ಲಿ ಅಘೋಷಿತ ಬಂದ್: ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದ ವ್ಯಾಪಾರ ಸ್ಥರು ಮಂಗಳವಾರವೇ ಅಂಗಡಿ ಬಾಗಿಲು ಮುಚ್ಚಿದ್ದರು. ಅಂತೆಯೇ ಬುಧವಾರವೂ ಮದ್ದೂರು ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಮಾಲೀಕರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಗೌರವ ಸಲ್ಲಿಸಿದರು.
ಗಂಧದ ತುಂಡು ತಂದಿದ್ದ ರೈತ: ಕೃಷ್ಣ ಅಂತ್ಯಸಂಸ್ಕಾರಕ್ಕೆ ಮದ್ದೂರು ತಾಲೂಕು ಡಿ.ಹೊಸೂರು ಗ್ರಾಮದ ರೈತ ದೇವರಾಜು ಸ್ವತಃ ಬೆಳೆದಿದ್ದ ಗಂಧದ ಮರದ ತುಂಡನ್ನು ತಂದು ಅರ್ಪಿಸಿದರು. ‘ರೈತರಿಗೆ ಶ್ರೀಗಂಧ ಬೆಳೆಯಲು ಕೃಷ್ಣ ಅವಕಾಶ ನೀಡಿದ್ದರು. ಅವರಿಂದಲೇ ನಾನು ಮರ ಬೆಳೆದಿದ್ದೇನೆ. ಆದ್ದರಿಂದ ಗಂಧದ ತುಂಡನ್ನು ಚಿತೆಗೆ ಅರ್ಪಿಸುತ್ತಿದ್ದೇನೆ’ ಎಂದು ದೇವರಾಜು ಹೇಳಿದರು.
ಕಾಫಿ ಡೇ ಅಚ್ಚುಮೆಚ್ಚು: ಸೋಮನಹಳ್ಳಿಯಲ್ಲಿರುವ ಕಾಫಿ ಡೇ ಎಂದರೆ ಎಸ್.ಎಂ.ಕೃಷ್ಣ ಅವರಿಗೆ ಅಚ್ಚುಮೆಚ್ಚು. ಬೆಂಗಳೂರು-ಮೈಸೂರಿಗೆ ಪ್ರಯಾಣಿಸುವ ವೇಳೆ ಮದ್ದೂರಿಗೆ ಭೇಟಿ ಕೊಟ್ಟಾಗ ಕಾಫಿ ಡೇನಲ್ಲಿಯೇ ಕಾಲ ಕಳೆಯುತ್ತಿದ್ದರು. ಅಲ್ಲಿನ ಸಿಬ್ಬಂದಿ ಜತೆ ಬೆರೆಯುತ್ತಿದ್ದರು. ಅಂತ್ಯಕ್ರಿಯೆಗೆ ಬಂದಿದ್ದ ಸಾವಿರಾರು ಜನರಿಗೆ ಕಾಫಿ ಡೇ ವತಿಯಿಂದ ಟೀ, ಕಾಫಿಯನ್ನು ನೀಡುವ ಮೂಲಕ ಕೃಷ್ಣ ಅವರಿಗೆ ಗೌರವ ಸಲ್ಲಿಸಲಾಯಿತು.
ದುಬಾರಿ ವೆಚ್ಚದ ಪಲ್ಲಕ್ಕಿ: ಕೃಷ್ಣ ಅವರ ಅಂತಿಮ ಯಾತ್ರೆಗೆಂದು ದುಬಾರಿ ವೆಚ್ಚದ ಹಂಸದ ಮಾದರಿ ಪಲ್ಲಕ್ಕಿ ಮಾಡಲಾಗಿತ್ತು. ಸುಮಾರು 300 ಕೆಜಿ ತೂಕದ ವಿವಿಧ ಹೂವುಗಳನ್ನು ಬಳಲಾಗಿತ್ತು. ಮಂಡ್ಯದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಬಿದಿರಿನಿಂದ ಪಲ್ಲಕ್ಕಿ ಮಾಡಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಕೇರಳದಿಂದ ಬಂದಿದ್ದ ಅಭಿಮಾನಿ: ಎಸ್ಎಂಕೆ ಅಂತಿಮ ದರ್ಶನ ಪಡೆಯಲು ಕೇರಳದಿಂದ ಅಭಿಮಾನಿಯೊಬ್ಬ ಸೋಮನಹಳ್ಳಿ ಗ್ರಾಮಕ್ಕೆ ಬಂದಿದ್ದ. ಬಿಸಿಯೂಟದಂತಹ ಅತ್ಯುತ್ತಮ ಕಾರ್ಯಕ್ರಮ ನೀಡಿದ ಕೃಷ್ಣ ಅವರ ವ್ಯಕ್ತಿತ್ವ ನನಗೆ ಇಷ್ಟವಾಗಿತ್ತು. ಆದ್ದರಿಂದ ಅವರ ಅಭಿಮಾನಿಯಾಗಿ ಅಂತಿಮ ದರ್ಶಕ್ಕೆ ಬಂದಿದ್ದೇನೆಂದು ಆತ ಹೇಳಿದ.
ಜಿಲ್ಲಾಡಳಿತದಿಂದ ವ್ಯವಸ್ಥೆ: ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ ಬೆಂಗಳೂರು-ಮೈಸೂರು ರಸ್ತೆಯನ್ನು ಒನ್ವೇ ಮಾಡಿ ಬೇರೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ, ಬ್ಯಾರಿಕೇಡ್ ಅಳವಡಿಸಿ ದರ್ಶನಕ್ಕೆ ಶಾಮಿಯಾನ ಹಾಕಿಸಿ ವ್ಯವಸ್ಥೆ ಮಾಡಿತ್ತು. ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಮಾಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.
ಜೇಬುಗಳ್ಳರ ಕೈಚಳಕ: ಎಸ್.ಎಂ.ಕೃಷ್ಣರ ಅಂತಿಮ ದರ್ಶನ ಪಡೆಯಲು ನಗರದಲ್ಲಿ ಸಹಸ್ರಾರು ಸಾರ್ವಜನಿಕರು ಜಮಾಯಿಸಿದ್ದ ವೇಳೆ ಜೇಬುಗಳ್ಳರು ಕೈಚಳಕ ತೋರಿದ್ದು ಕಂಡುಬಂತು. ಈ ಕಳ್ಳನೊರ್ವ ಸಿಕ್ಕಿಬಿದ್ದದ್ದಾನೆ. ಪುರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.
ರಾಜಕಾರಣಿಗಳಿಗೆ ಆದರ್ಶವಾಗಿದ್ದ, ಆಡಳಿತಗಾರರಿಗೆ ಮಾರ್ಗದರ್ಶಕರಾಗಿದ್ದ ಎಸ್.ಎಂ.ಕೃಷ್ಣ ನಿಧನ ದಿಗ್ಭŠಮೆ ಮೂಡಿಸಿದೆ. ಬಿಜೆಪಿ ಸೇರಿ ಪ್ರಧಾನ ಮಂತ್ರಿಗಳಿಗೆ ಅತ್ಯಂತ ಹತ್ತಿರದ ನಾಯಕರಾಗಿದ್ದರು. ಹಿಂದಿನ ಪೀಳಿಗೆಯ ಮಹತ್ವದ ಘಟ್ಟ ಕಳೆದುಕೊಂಡಂತಾಗಿದೆ. ಬರುವಂತಹ ದಿನಗಳಲ್ಲಿ ಅವರ ಬದುಕು ನಮಗೆ ಆದರ್ಶವಾಗಲಿ.
| ಬಸವರಾಜ ಬೊಮ್ಮಾಯಿ ಸಂಸದ, ಮಾಜಿ ಸಿಎಂ
ನನಗೆ ಹಾಗೂ ನಮ್ಮಅಣ್ಣನಿಗೆ ರಾಜಕೀಯವಾಗಿ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಇದಲ್ಲದೆ ನಮ್ಮ ಹಾಗೂ ಅವರ ಕುಟುಂಬದ ನಡುವೆ ಸಂಬಂಧ ಸಹ ಬೆಳೆದುಕೊಂಡಿದೆ. ಅಧಿಕಾರಾವಧಿಯಲ್ಲಿ ಎಂದೂ ಪ್ರಚಾರಕ್ಕೆ ಆಸೆ ಪಟ್ಟವರಲ್ಲ. ವಿದ್ಯಾರ್ಥಿಗಳು, ಆರ್ಥಿಕ ವ್ಯವಸ್ಥೆ, ಶಿಕ್ಷಣ ಹಾಗೂ ರೈತರ ಬಗ್ಗೆ ಹಲವು ಚಿಂತನೆ ಮಾಡಿ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರು.
| ಡಿ.ಕೆ.ಸುರೇಶ್ ಮಾಜಿ ಸಂಸದ
ನಮ್ಮ ಜಿಲ್ಲೆಗೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಈ ಹಿಂದೆ ಎರಡು ಪಥಗಳಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು 4 ಪಥಗಳ ಹೆದ್ದಾರಿಯಾಗಿ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
| ಎಚ್.ಸಿ.ಬಾಲಕೃಷ್ಣ ಶಾಸಕ
ಮೂರನೇ ಟೆಸ್ಟ್ ಪಂದ್ಯಕ್ಕೆ ಈತನಿಗೆ ಅವಕಾಶ ಕೊಡಬೇಡಿ; Team ಇಂಡಿಯಾಗೆ ಸಲಹೆ ನೀಡಿದ ಖ್ಯಾತ ಕ್ರಿಕೆಟಿಗ
ಸಾವಿರ ಕೋಟಿ ಗಳಿಕೆ ಕಂಡ Pushpa 2; ವೈರಲ್ ಆಗುತ್ತಿದೆ ಶೇಖಾವತ್ ರೀ ಎಂಟ್ರಿ ವಿಡಿಯೋ