More

  ಸಾಲ ಹಿಂದಿರುಗಿಸದ ರೌಡಿ ಹತ್ಯೆ| 20 ಸಾವಿರ ರೂ. ವಿಚಾರವಾಗಿ ಜಗಳ ಹಳೇಗುಡ್ಡದ ಹಳ್ಳಿಯಲ್ಲಿ ಕೃತ್ಯ

  ಬೆಂಗಳೂರು: ಸಾಲ ಹಿಂದಿರುಗಿಸದೆ ಸತಾಯಿಸುತ್ತಿದ್ದ ರೌಡಿಶೀಟರ್​ನನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

  ಥಣಿಸಂದ್ರದ ನಿವಾಸಿ ಸುಹೇಬ್ ಪಾಷಾ (34) ಹತ್ಯೆಯಾದವ. ಆರೋಪಿಗಳಾದ ಖಲೀದ್ (35), ವಾಸಿಂ (36) ಸೇರಿ ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಅಪರಾಧ ಹಿನ್ನೆಲೆಯುಳ್ಳ ಸುಹೇಬ್ ರೌಡಿ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ ಪ್ರಕರಣಗಳು ದಾಖಲಾಗಿದೆ. ಈತ ಕೆಲ ದಿನಗಳ ಹಿಂದೆ ಪರಿಚಿತ ಖಲೀದ್​ನಿಂದ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಇತ್ತೀಚೆಗೆ ಸಾಲ ಹಿಂದಿರುಗಿಸುವಂತೆ ಸುಹೇಬ್​ಗೆ

  ಸೂಚಿಸಿದ್ದರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಖಲೀದ್ ಈ ವಿಚಾರವಾಗಿ ಸುಹೇಬ್ ಜತೆ ಜಗಳ ಮಾಡಿದ್ದ.

  ಏನು ಬೇಕಾದರೂ ಮಾಡಿಕೋ ಹಣ ಹಿಂದಿರುಗಿಸುವುದಿಲ್ಲ ಎಂದು ಬೆದರಿಸಿದ್ದ ಸುಹೇಬ್, ಸಾಲ ಕೊಟ್ಟಿದ್ದ ಖಲೀದ್ ಮೇಲೆಯೇ ಹಲ್ಲೆ ನಡೆಸಿದ್ದ. ಈ ವಿಚಾರವನ್ನು ಖಲೀದ್ ತನ್ನ ಸಂಬಂಧಿ ವಾಸಿಂಗೆ ತಿಳಿಸಿದ್ದ. ಶನಿವಾರ (ಜ.11) ತಡರಾತ್ರಿ 12.45ರಲ್ಲಿ ಜೆ.ಜೆ. ನಗರದ ಹಳೇಗುಡ್ಡದಹಳ್ಳಿ ಬಳಿ ಸುಹೇಬ್ ಇರುವ ಬಗ್ಗೆ ಮಾಹಿತಿ ಪಡೆದ ವಾಸಿಂ, ಖಲೀದ್ ಹಾಗೂ ಇತರರ ಜತೆಗೂಡಿ ತೆರಳಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

  ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಜೆ.ಜೆ. ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts