ಕ್ರೇನ್ ದುರಂತದ ಕಾರ್ಖಾನೆಗೆ ಖಾಕಿ ನಿಗಾ

ಸೇಡಂ: ಕ್ರೇನ್ ಬಿದ್ದು ಆರು ಜನ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಕಾರ್ವಿುಕರು ಶುಕ್ರವಾರ ಬೆಳಗ್ಗೆ ಮಿಂಚಿನ ಪ್ರತಿಭಟನೆಗಿಳಿದು ಕಲ್ಲು ತೂರಾಟ ನಡೆಸಿದ್ದರಿಂದ ಕೋಡ್ಲಾದ ಶ್ರೀಸಿಮೆಂಟ್ ಕಾರ್ಖಾನೆ ಪರಿಸರದಲ್ಲಿ ಉದ್ರಿಕ್ತ ಸ್ಥಿತಿ ನಿರ್ವಣವಾಗಿತ್ತು. ಕಲ್ಲೆಸೆತದಿಂದ ಇನ್​ಸ್ಪೆಕ್ಟರ್ ಸೇರಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸ್ ಜೀಪ್ ಹಾಗೂ ಪೊಲೀಸರನ್ನು ಕರೆತಂದ ಈಶಾನ್ಯ ಸಾರಿಗೆ ಬಸ್ ಜಖಂಗೊಂಡಿದೆ.

ಸಶಸ್ತ್ರ ಮೀಸಲು ಪಡೆಯ ಇನ್​ಸ್ಪೆಕ್ಟರ್ ಶರಣಪ್ಪ, ಸಿಪಿಐ ಶಂಕರಗೌಡ ಸೇರಿ 8 ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ, ಲಾಠಿ ಬೀಸಲಾಗಿದ್ದು, ಬಿಗಿ ಬಂದೋಬಸ್ತ್​ನಿಂದ ಸದ್ಯ ವಾತಾವರಣ ಶಾಂತವಾಗಿದೆ.

ಕಾರ್ಖಾನೆಗೆ ಶುಕ್ರವಾರ ಪ್ರತ್ಯೇಕವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ. ವೆಂಕಟೇಶಕುಮಾರ, ಎಸ್​ಪಿ ಎನ್. ಶಶಿಕುಮಾರ ಪರಿಸ್ಥಿತಿ ಅವಲೋಕಿಸಿದರು. ಕಾರ್ಖಾನೆ ಪರಿಸರದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣರಾದ 125ಕ್ಕೂ ಅಧಿಕ ಜನರನ್ನು ಬಿಹಾರಿ ಕಾಲನಿಗಳಿಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುರಂತ ಸಾವು ಕಂಡವರು

ಗುರುವಾರ ರಾತ್ರಿ ಕಾರ್ಖಾನೆಯಲ್ಲಿ ಕ್ರೇನ್ ಬಿದ್ದು ಬಿಹಾರ ಮೂಲದ ಕಾರ್ವಿುಕರಾದ ತಬರಾಕ್ ಅಲಿ (26), ಬಿಪಿನ್ ಸಹಾನಿ (32), ಅಜಯ (31), ಕೋಕೊ (26), ಮಹ್ಮದ್ ಜುಬೇರ್ (32), ಸುಧಾಕರ (30) ಮೃತಪಟ್ಟಿದ್ದಾರೆ. ಶಹಜಾದ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಯಲ್ಲಿದ್ದಾರೆ. ಕಾರ್ಖಾನೆ ಛಾವಣಿಗೆ ಹೊಂದಿಕೊಂಡಂತೆ ವೆಲ್ಡಿಂಗ್ ಮಾಡುತ್ತಿದ್ದಾಗ ರಾಡ್ ಮುರಿದು ಇಲ್ಲವೇ ಚೈನ್ ತುಂಡಾಗಿ ಕ್ರೇನ್ ಬಿದ್ದಿರಬಹುದೆಂದು ಶಂಕಿಸಲಾಗಿದೆ. ತಲಾ -ಠಿ;12 ಲಕ್ಷ ಪರಿಹಾರ

ಮೃತಪಟ್ಟವರ ಕುಟುಂಬದವರಿಗೆ ಕಾರ್ಖಾನೆ ಆಡಳಿತ ಮಂಡಳಿ ತಲಾ 12 ಲಕ್ಷ ರೂ. ಪರಿಹಾರ ನೀಡಲು ಒಪ್ಪಿದೆ. ಸರ್ಕಾರದಿಂದಲೂ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಸೇಡಂ ಸಹಾಯಕ ಆಯುಕ್ತರಿಗೆ ಆದೇಶಿಸಲಾಗಿದೆ. ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮ ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಸುರಕ್ಷಿತ ಕ್ರಮ ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂಬ ದೂರುಗಳಿವೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಎನ್.ಶಶಿಕುಮಾರ ಎಸ್​ಪಿ

ಸಂತ್ರಸ್ತ ಕುಟುಂಬಗಳ ಬಗ್ಗೆ ಸಹಾನುಭೂತಿ ಇದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕಂಪನಿ ವಿರುದ್ಧ ದೂರು ದಾಖಲಿಸಲಾಗಿದೆ. ತನಿಖೆ ಮುಗಿಯುವವರೆಗೆ ಕಂಪನಿ ಕೆಲಸ-ಕಾರ್ಯಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.

| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ