ಕುಮಾರಸ್ವಾಮಿ ವಿರುದ್ಧದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕದ ಸಿ.ಪಿ.ಯೋಗೀಶ್ವರ್​ ನಡೆ ಎತ್ತ?

ರಾಮನಗರ: ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ನೀಡುವಂತೆ ಆಗ್ರಹಿಸಿ ಬಿಜೆಪಿ ಇಂದು ಆಯೋಜಿಸಿದ್ದ ರಾಮನಗರಿಂದ ಬೆಂಗಳೂರಿನ ವರೆಗಿನ ಪಾದಯಾತ್ರೆಯಲ್ಲಿ ರಾಮನಗರ ಜಿಲ್ಲೆಯ ಪ್ರಮುಖ ನಾಯಕ, ಮಾಜಿ ಸಚಿವ ಸಿ.ಪಿ ಯೋಗೀಶ್ವರ್​ ಅವರ ಸುಳಿವೇ ಇರಲಿಲ್ಲ.

ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಅತ್ಯಂತ ಪ್ರಬಲ ಹೋರಾಟ ನಡೆಸುತ್ತಿದೆ. ಅದರ ಭಾಗವಾಗಿ ಇಂದು ಎಚ್ಡಿಕೆ ಅವರ ರಾಜಕೀಯ ಅಖಾಡ ರಾಮನಗರದ ಮೂಲಕವೇ ಬಿಜೆಪಿ ಬೃಹತ್​ ಹೋರಾಟ ಆರಂಭಿಸಿದೆ. ರಾಮನಗರದ ಮಟ್ಟಿಗೆ ಬಿಜೆಪಿಗೆ ಇರುವ ಬಹುದೊಡ್ಡ ನಾಯಕತ್ವ ಎಂದರೆ ಯೋಗೀಶ್ವರ್​ ಮಾತ್ರ. ಆದರೆ, ಅವರ ಅನುಪಸ್ಥಿತಿ ನಾನಾ ಚರ್ಚೆಗಳಿಗೆ ಕಾರಣವಾಯಿತು.

ಚನ್ನಪಟ್ಟಣದಲ್ಲಿ ಎಚ್ಡಿಕೆ ಅವರ ವಿರುದ್ಧವೇ ಸೋತಿರುವ ಯೋಗೀಶ್ವರ್​, ಎಚ್ಡಿಕೆ ಅವರಿಂದಲೇ ತೆರವಾಗಿರುವ ರಾಮನಗರ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂದೂ ಬಿಂಬಿಸಲ್ಪಟ್ಟಿದ್ದಾರೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರವನ್ನು ಗೆಲ್ಲುವತ್ತ ಗುರಿ ನೆಟ್ಟಿರುವ ಬಿಜೆಪಿಗೆ ಯೋಗೀಶ್ವರ್​ ಅವರ ಬಲ ಅನಿವಾರ್ಯ. ಆದರೆ, ಇಂದು ಪಾದಯಾತ್ರೆಗೆ ಆಗಮಿಸದ ಯೋಗೀಶ್ವರ್​ ನಡೆಯಿಂದ ಬಿಜೆಪಿಗೆ ಇರುಸುಮುರುಸು ಉಂಟಾಗಿದೆ.

ಯೋಗೀಶ್ವರ್ ಗೈರಿಗೆ ಬಣ್ಣ ಕಟ್ಟುವ ಅಗತ್ಯವಿಲ್ಲ

ಯೋಗೀಶ್ವರ್​ ಅವರ ಗೈರು ಹಾಜರಿಯ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಯೋಗೀಶ್ವರ್​ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಪಾದಯಾತ್ರೆಗೆ ಆಗಮಿಸಿಲ್ಲ. ಅವರ ಸೋದರ ಸಿ.ಪಿ ರಾಜೇಶ್​ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಯೋಗೀಶ್ವರ್​ ಅವರು ಹೋರಾಟಕ್ಕೆ ಶುಭ ಕೋರಿದ್ದಾರೆ. ಇದಕ್ಕೆ ಬೇರೆ ಬಣ್ಣ ಕಟ್ಟು ಅಗತ್ಯವಿಲ್ಲ ಎಂದಿದ್ದಾರೆ.

ಇನ್ನೊಂದೆಡೆ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ರುದ್ರೇಶ್​ಗೌಡ ಅವರಿಗೆ ಹೋರಾಟದ ನಾಯಕತ್ವ ಸಿಕ್ಕಿರುವುದೂ ಯೋಗೀಶ್ವರ್​ ಅವರ ಮುನಿಸಿಗೆ ಕಾರಣ ಎಂದೂ ಹೇಳಲಾಗುತ್ತಿದೆ.

ಆದರೆ, ಪಕ್ಷಾಂತರ ಪರ್ವಗಳ ಹಿನ್ನೆಲೆ ಹೊಂದಿರುವ ಯೋಗೀಶ್ವರ್​ ವಿಧಾನಸಭೆ ಚುನಾವಣೆ ಸೋಲಿನ ನಂತರ ಜಿಲ್ಲಾ ರಾಜಕೀಯ ಚಟುವಟಿಕೆಯಿಂದಲೇ ದೂರ ಉಳಿದಿರುವುದು ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಅಷ್ಟಾಗಿ ಭಾಗವಹಿಸದೇ ಇರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.