ಕೆರಿಬಿಯನ್ ಟಿ20ಯಲ್ಲಿ ದಾಖಲೆ: ಭರ್ಜರಿ ಚೇಸಿಂಗ್ ಎದುರು ಕ್ರಿಸ್ ಗೇಲ್ ಶತಕ ವ್ಯರ್ಥ

ಸೇಂಟ್ ಕಿಟ್ಸ್: ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಿ20 ಕ್ರಿಕೆಟ್​ನ ಹಲವು ದಾಖಲೆಗಳು ನಿರ್ವಣಗೊಂಡಿವೆ. ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ (116 ರನ್, 62 ಎಸೆತ, 7 ಬೌಂಡರಿ, 10 ಸಿಕ್ಸರ್) ಜಮೈಕಾ ತಲ್ಲವಾಹ್ಸ್ ಪರ ಭರ್ಜರಿ ಶತಕ ಸಿಡಿಸಿ ಬೀಗಿದರು.

ಗೇಲ್ ಸಿಡಿಸಿದ ಟಿ20 ಕ್ರಿಕೆಟ್​ನ 22ನೇ ಶತಕದಿಂದ ಜಮೈಕಾ ತಂಡ 4 ವಿಕೆಟ್​ಗೆ 241 ರನ್ ಪೇರಿಸಿತು. ಪ್ರತಿಯಾಗಿ ಸೇಂಟ್ಸ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡ 18.5 ಓವರ್​ಗಳಲ್ಲಿ 6 ವಿಕೆಟ್​ಗೆ 242 ರನ್ ಪೇರಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದ 2ನೇ ಗರಿಷ್ಠ ಚೇಸಿಂಗ್ ದಾಖಲೆ ನಿರ್ವಿುಸಿ ತಿರುಗೇಟು ನೀಡಿತು.

ಎವಿನ್ ಲೆವಿಸ್ 18 ಎಸೆತಗಳಲ್ಲೇ 53 ರನ್, ಡೆವೊನ್ ಥಾಮಸ್ 40 ಎಸೆತಗಳಲ್ಲಿ 71 ರನ್ ಮತ್ತು ಫ್ಯಾಬಿಯನ್ ಅಲೆನ್ 15 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿ ಪ್ಯಾಟ್ರಿಯಾಟ್ಸ್​ಗೆ ಗೆಲುವು ತಂದರು. 2018ರಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡದ 244 ರನ್ ಸವಾಲು ಬೆನ್ನಟ್ಟಿದ್ದು ಟಿ20 ಇತಿಹಾಸದ ಗರಿಷ್ಠ ಚೇಸಿಂಗ್ ವಿಶ್ವದಾಖಲೆ. ಪಂದ್ಯದಲ್ಲಿ 37 ಸಿಕ್ಸರ್ ಸಿಡಿದಿದ್ದು ಟಿ20 ದಾಖಲೆಯಾಗಿದೆ. ಈ ಮುನ್ನ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ ಬಲ್ಖ್ ಲೆಜೆಂಡ್ಸ್- ಕಾಬುಲ್ ಜ್ವಾನನ್ ನಡುವಿನ ಪಂದ್ಯದಲ್ಲೂ ಇಷ್ಟೇ ಸಿಕ್ಸರ್ ಸಿಡಿದಿದ್ದವು. ಆ ಪಂದ್ಯದಲ್ಲೂ ಗೇಲ್, ಲೆಜೆಂಡ್ಸ್ ಪರ 10 ಸಿಕ್ಸರ್ ಸಿಡಿಸಿದ್ದರು.-ಏಜೆನ್ಸೀಸ್

22- ಕ್ರಿಸ್ ಗೇಲ್ 22ನೇ ಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಗಿಂತ 14 ಶತಕಗಳ ಮುನ್ನಡೆ ಕಂಡಿದ್ದಾರೆ. ಆಸ್ಟ್ರೇಲಿಯಾದ ಮೈಕೆಲ್ ಕ್ಲಿಂಗರ್ 8 ಶತಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *