ಸಿಪಿಐಎಂಎಲ್ ರಾಜ್ಯ ಸಮ್ಮೇಳನ 4ರಿಂದ

ಚಿಕ್ಕಮಗಳೂರು: ರೈತರು, ಕಾರ್ವಿುಕರು, ಬಡವರು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ರ್ಚಚಿಸಿ ನಿರ್ಣಯ ಕೈಗೊಂಡು ಜನಾಂದೋಲನ ರೂಪಿಸಲು ಸಿಪಿಐಎಂಎಲ್​ನಿಂದ ಆ.4ರಿಂದ 6ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಮ್ಮೇಳನ ಆಯೋಜಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಚಂದ್ರನ್, ಪಾಲಿಟ್ ಬ್ಯೂರೋ ಸದಸ್ಯ ಪಿ.ಜೆ. ಜೇಮ್್ಸ, ಮುಖಂಡರಾದ ಮಾನಸಯ್ಯ ಇತರರು ಭಾಗವಹಿಸುವರು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನವ ಉದಾರ ಆರ್ಥಿಕ ನೀತಿಯಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿಯಿಂದ ಬಂಡವಾಳಶಾಹಿಗಳ ಹಿಡಿತ ಬಲವಾಗಿ ಎಲ್ಲ ಕ್ಷೇತ್ರಗಳು ಬಿಕ್ಕಟ್ಟಿನಲ್ಲಿವೆ ಎಂದು ದೂರಿದರು.

ಕೃಷಿ ನೀತಿ ಬಂಡವಾಳಶಾಹಿಗಳ ಪರ ಇರುವುದರಿಂದ ಸಾಮಾನ್ಯ, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಇಡೀ ಕಾರ್ವಿುಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಗುತ್ತಿಗೆ ಕಾರ್ವಿುಕ ಪದ್ಧತಿಯಿಂದ ಕಡಿಮೆ ಕೂಲಿಗೆ ಶ್ರಮಿಸುವಂತಾಗಿದೆ ಎಂದರು.

ಏಕ ಕಾನೂನು, ಗೋಹತ್ಯೆ ನಿಷೇಧ, ಏಕವಸ್ತ್ರ ಸಂಹಿತೆ, ಏಕ ಆಹಾರ ಪದ್ಧತಿ ಜಾರಿಗೊಳಿಸುವ ಮಾತುಗಳನ್ನು ಕೆಲ ಕೇಂದ್ರ ಮಂತ್ರಿಗಳು, ಸಂಸದರು ಮಾತನಾಡುತ್ತಿದ್ದಾರೆ. ಜತೆಗೆ ಸುಧಾರಣಾವಾದಿ ಯೋಜನೆಗಳು ಜನರನ್ನು ಸಂಕಷ್ಟಕ್ಕೆ ದೂಡುವಂತಿವೆ ಎಂದು ಆರೋಪಿಸಿದರು.