ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಸಿಪಿಐಎಂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಸೆಸ್ಕ್ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಿಪಿಐಎಂ ಸಿದ್ದಾಪುರ ಸಮಿತಿಯ ಸಂಚಾಲಕ ಎನ್.ಡಿ.ಕುಟ್ಟಪ್ಪ ಮಾತನಾಡಿ, ನಿರಂತರವಾಗಿ ಸಿದ್ದಾಪುರ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ವರ್ತಕರು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ನಡೆಯುತ್ತಿದ್ದು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣದಲ್ಲಿ ಈ ಸಮಸ್ಯೆ ಬಗ್ಗೆ ಗಮನಹರಿಸಬೇಕು. ಈ ಸಮಸ್ಯೆಯನ್ನು ತಕ್ಷಣ ಪರಿಹಾರ ಮಾಡಲು ಪ್ರಯತ್ನಿಸಬೇಕು. ಸಿದ್ದಾಪುರ ವ್ಯಾಪ್ತಿಯಲ್ಲಿ ಈಗಾಗಲೇ ಉಪಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾಪವಿದ್ದು ಅನುಮೋದನೆಯಾಗಿದೆ. ತಕ್ಷಣದಲ್ಲಿ ಈ ಉಪಕೇಂದ್ರದ ಕೆಲಸ ಆರಂಭಿಸಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಸಿದ್ದಾಪುರ ಸೆಸ್ಕ್ ಕಚೇರಿಯ ಅಧಿಕಾರಿ ಸ್ವರೂಪಾ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಪಿಐಎಂ ಸಮಿತಿ ಸದಸ್ಯ ಮುಸ್ತಾಫ, ಹಂಸ, ಎಸ್.ಬೈಜು, ತಂಗಚ್ಚನ್, ಅನಿಲ್ ಇನ್ನಿತರರಿದ್ದರು.
ಸಿದ್ದಾಪುರ ಸೆಸ್ಕ್ ಕಚೇರಿ ಮುಂದೆ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.