ಹಸುಗಳ ವಿರುದ್ಧ ದೂರು ನೀಡಿದ ಶಾಲಾ ಮಕ್ಕಳು

ನವದೆಹಲಿ: ಶಾಲೆಯ ಕ್ಯಾಂಪಸ್​ನಲ್ಲಿ ಓಡಾಡುವ ಹಸು, ಜಾನುವಾರುಗಳಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಶಾಲಾ ಮಕ್ಕಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬಿಸಾಂದಾ ಪಟ್ಟಣದ ಸಿಂಗ್​ಪುರ್​ ಹಳ್ಳಿಯಲ್ಲಿರುವ ಹೈಸ್ಕೂಲ್​ ಮಕ್ಕಳು ಈ ಆರೋಪ ಮಾಡಿದ್ದಾರೆ. ಶಾಲೆ ಸುತ್ತಮುತ್ತ ಇರುವ ಹಸುಗಳಿಂದಾಗಿ ನಮ್ಮ ಪಾಠ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ. ಅಲ್ಲದೆ ಅದೇ ಹಳ್ಳಿಜನರೂ ಕೂಡ ಪೊಲೀಸರಿಗೆ ದೂರು ನೀಡಿದ್ದು, ಹಸುಗಳು ಪಕ್ಕದ ಗ್ರಾಮಗಳಿಂದ ನಮ್ಮ ಹಳ್ಳಿಗೆ ಬಂದು ಬೆಳೆಗಳನ್ನು ನಾಶ ಮಾಡುತ್ತವೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಲೆಯ ಬಳಿ ಇದ್ದ ಗೋವುಗಳನ್ನೆಲ್ಲ ಗೋಶಾಲೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಗೋವುಗಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಿದ್ದಾರೆ. ಈಗ ಅದೇ ರಾಜ್ಯದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಗೋವುಗಳ ವಿರುದ್ಧವೇ ದೂರು ದಾಖಲಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದೆ.

Leave a Reply

Your email address will not be published. Required fields are marked *