ಗೋಮೂತ್ರ, ಸಗಣಿಯ ಸೋಪ್​, ಫೇಸ್​ಪ್ಯಾಕ್​ಗಳು ಶೀಘ್ರದಲ್ಲೇ ಅಮೆಜಾನ್​ನಲ್ಲಿ ಲಭ್ಯ

ಮಥುರಾ: ಹಸುವಿನ ಮೂತ್ರ, ಸಗಣಿಯಿಂದ ತಯಾರಿಸಿದ ಸೋಪು, ಫೇಸ್​ಪ್ಯಾಕ್​, ಶಾಂಪೂ ಹಾಗೂ ಔಷಧೀಯ ವಸ್ತುಗಳನ್ನು ಶೀಘ್ರವೇ ಅಮೆಜಾನ್​ನಲ್ಲಿ ಸಿಗಲಿದೆ ಎಂದು ಆರ್​ಎಸ್ಎಸ್​ ಬೆಂಬಲಿತ ಕೇಂದ್ರವೊಂದು ತಿಳಿಸಿದೆ.

ಮಥುರಾದ ಫರಾಹ್​ ಪಟ್ಟಣದಲ್ಲಿ ಆರ್​ಎಸ್​ಎಸ್​ನಿಂದ ನಡೆಸಲಾಗುತ್ತಿರುವ ದೀನ್​ ದಯಾಳ್​ ದಾಮ ಕೇಂದ್ರ ಗೋಮೂತ್ರ, ಸಗಣಿಯಿಂದ ತಯಾರಿಸಲಾದ ಉತ್ಪನ್ನಗಳು, ವಿವಿಧ ತರಹದ ಬಟ್ಟೆಗಳನ್ನು ಬೇರೆ ವೆಬ್​ಸೈಟ್​ ಮೂಲಕ ಮಾರಾಟ ಮಾಡುತ್ತಿತ್ತು.

ನಾವು ಅಮೇಜಾನ್​ ಸಂಸ್ಥೆಯೊಂದಿಗೆ ಕೆಲವು ದಿನಗಳ ಹಿಂದೆ ಚರ್ಚೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ನಮ್ಮ ಉತ್ಪನ್ನಗಳು ಅಮೆಜಾನ್​ ಆನ್​ಲೈನ್​ ಸಂಸ್ಥೆಯಲ್ಲಿ ಸಿಗಲಿದೆ. ಜನರು ಅದನ್ನು ಸುಲಭವಾಗಿ ಪಡೆಯಬಹುದು ಎಂದು ಮ್ಯಾನೇಜರ್​ ಘನಾಶ್ಯಾಮ್​ ಗುಪ್ತಾ ತಿಳಿಸಿದ್ದಾರೆ. ಯಾವಾಗ ನಮ್ಮ ಕೇಂದ್ರದ ಉತ್ಪನ್ನಗಳ ಮಾರಾಟ ಶುರುವಾಗುತ್ತದೆ ಎಂಬುದನ್ನು ಅಮೆಜಾನ್​ನವರು ತಿಳಿಸುತ್ತಾರೆ ಎಂದಿದ್ದಾರೆ.

ಗುಪ್ತಾ ಅವರು 20 ವರ್ಷಗಳಿಂದ ದೀನ್ ದಯಾಳ್​ ಧಾಮದಲ್ಲಿ ಇದ್ದಾರೆ. ಇಲ್ಲಿನ ಸುತ್ತಮುತ್ತಲ ಹಳ್ಳಿಗಳ ಮಹಿಳೆಯರು ಧಾಮದಲ್ಲಿ ಕೆಲಸ ಮಾಡುತ್ತಾರೆ. ಹಾಗೇ ಇಲ್ಲಿ ದೀನ ದಯಾಳ್ ಕಾಮಧೇನು ಗೋಶಾಲಾ ಫಾರ್ಮಸಿಯೂ ಇದೆ. ವೈರಲ್​ ಫಿವರ್​ , ರೋಗನಿರೋಧಕ ಶಕ್ತಿ ಹೆಚ್ಚಿಸುವ, ಪಂಚಗವ್ಯ ಚೂರ್ಣ, ಚ್ಯವನಪ್ರಾಶ ಮತ್ತಿತರ ಔಷಧಗಳು ಇಲ್ಲಿ ಸಿಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.