ದನ ಅಕ್ರಮ ಸಾಗಾಟ ಪತ್ತೆ

ಕಾರ್ಕಳ: ತಾಲೂಕು ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಅಕ್ರಮ ಕಸಾಯಿಖಾನೆಗೆ ದನಗಳನ್ನು ಕಳವುಗೈದು ಪಿಕ್‌ಅಪ್ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಹಿಂದುಪರ ಸಂಘಟನೆ ಕಾರ್ಯಕರ್ತರು ನಲ್ಲೂರು ಪೇರಲ್ಕೆಯಲ್ಲಿ ನಸುಕಿನ ಜಾವ 4.30ಕ್ಕೆ ಪತ್ತೆ ಹಚ್ಚಿದ್ದಾರೆ.

ವಾಹನವನ್ನು ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಎರಡು ಹೋರಿ ಹಾಗೂ ದನವೊಂದರ ಕತ್ತಿಗೆ ಹುರಿ ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು. ಜೀಪಿನಲ್ಲಿ ಚಾಲನಾ ಪರವಾನಗಿಯೊಂದು ಪತ್ತೆಯಾಗಿದ್ದು ಅದರಲ್ಲಿ ರೆಂಜಾಳ ರಾಜೇಶ್ ಮೆಂಡೋನ್ಸಾ ಎಂದು ದಾಖಲಾಗಿದೆ.
ಬಜಗೋಳಿ ಚೆಕ್‌ಪೋಸ್ಟ್ ಕರ್ತವ್ಯ ನಿರತ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ವಾಹನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

ವ್ಯಾಪಕಗೊಂಡ ದನ ಕಳವು ಜಾಲ: ತಾಲೂಕು ಕ್ರೀಡಾಂಗಣ ಪರಿಸರದಲ್ಲಿದ್ದ ನಾಲ್ಕು ದನಗಳನ್ನು ಕೆಲದಿನಗಳ ಹಿಂದೆಯಷ್ಟೇ ಕಳವುಗೈದಿರುವ ಪ್ರಕರಣ ನಡೆದಿತ್ತು. ಬಜಗೋಳಿ ಪರಿಸರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ದನ ಕಳವು ಕೃತ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಿಂದು ಪರ ಸಂಘಟನೆಗಳು ಮುಂದಾಗಿದೆ.