ಗೃಹಪ್ರವೇಶಕ್ಕೆ ಗೋಮಾತೆ ಉಡುಗೊರೆ !

ಮಂಗಳೂರು: ಗೃಹಪ್ರವೇಶಕ್ಕೆ ಸಾಮಾನ್ಯವಾಗಿ ಇಲೆಕ್ಟ್ರಾನಿಕ್ ಉಪಕರಣಗಳು, ಪಾತ್ರೆ ಪಗಡೆ, ಕೆಲವೊಬ್ಬರು ದುಡ್ಡು ಇತ್ಯಾದಿ ಉಡುಗೊರೆಯಾಗಿ ನೀಡುತ್ತಾರೆ. ಅದರೆ ಬಂಟ್ವಾಳ ಕೊಯಿಲ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಸದಸ್ಯರು ಗೋಮಾತೆ, ಕಲ್ಪ ವೃಕ್ಷವನ್ನು ಉಡುಗೊರೆ ನೀಡುವ ಮೂಲಕ ಸ್ಥಳೀಯವಾಗಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಭಜನೆಯ ಮೂಲಕ ತನ್ನದೇ ಹೊಸ ಹೊಸ ಶೈಲಿಯಲ್ಲಿ ಸಮಾಜ ಜಾಗೃತಿ ಮೂಡಿಸುತ್ತಿದೆ. ಅದರ ಭಾಗವಾಗಿ ಸ್ಥಳೀಯ ಕೃಷಿಕ ಕುದ್ಕೋಳಿ ಬಾರ್ಜಾರು ಕಾಂತಪ್ಪ ಪೂಜಾರಿ ಅವರ ಗೃಹಪ್ರವೇಶಕ್ಕೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೆ.28ರಂದು ಗೃಹಪ್ರವೇಶ ನಡೆದಿತ್ತು. ಗೋಮಾತೆ ಉಡುಗೊರೆ ಉಡುಗೊರೆಯಾಗಿ ನೀಡುವುದನ್ನು ಸದಸ್ಯರು ಗೌಪ್ಯವಾಗಿಟ್ಟಿದ್ದರು. ಪೂಜಾರಿಯವರ ಪುತ್ರ ಸಮಿತಿ ಸದಸ್ಯನಾಗಿದ್ದರೂ ಅವರಿಗೂ ಗೊತ್ತಿರಲಿಲ್ಲ. ಮಧ್ಯಾಹ್ನ ವೇಳೆಗೆ ಕುದ್ಕೋಳಿಯಿಂದ ಭಜನೆ, ಚೆಂಡೆ ಮೆರವಣಿಗೆ ಮೂಲಕ ಗೋವು ಹಾಗೂ ಕಲ್ಪವೃಕ್ಷವನ್ನು ಮನೆಗೆ ತರಲಾಯಿತು. ಕಲ್ಪವೃಕ್ಷವನ್ನು ಉಡುಗೊರೆಯಾಗಿ ನೀಡಿ ಪರಿಸರ ಹಾಗೂ ಗೋಮಾತೆಯ ಉಡುಗೊರೆ ಮೂಲಕ ಕೃಷಿ ಸಂಸ್ಕೃತಿ ಜಾಗೃತಿ ಮೂಡಿಸಿದ್ದು ಸೇರಿದವರನ್ನು ಬೆರಗುಗೊಳಿಸಿತು.

15 ಸಾವಿರ ರೂಪಾಯಿ ಮೌಲ್ಯ: ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಅಧ್ಯಕ್ಷ ರವೀಂದ್ರ ಪೂಜಾರಿ, ಸುರೇಶ್ ಕುದ್ಕೋಳಿ, ಸಂತೋಷ್ ಬಂಗೇರ, ರಾಕೇಶ್ ಬಿ., ದಿನೇಶ್, ಉಮೇಶ್ ಬಂಗೇರ, ದಯಾನಂದ ಸಪಲ್ಯ ಹಾಗೂ ಭಜನಾ ಮಂಡಳಿ ಸದಸ್ಯರು ಗೋಮಾತೆ ಉಡುಗೊರೆ ನೀಡುಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎಲ್ಲರೂ ತಮ್ಮ ಶಕ್ತ್ಯಾನುಸಾರ ದುಡ್ಡು ಹಾಕಿ 15 ಸಾವಿರ ರೂ.ಸಂಗ್ರಹಿಸಿ ಹಸು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಕೃಷಿ ಪ್ರಧಾನ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಗೋವಿಲ್ಲದೆ ಕೃಷಿಯಿಲ್ಲ ಎನ್ನುವ ನಿಟ್ಟಿನಲ್ಲಿ ಕೃಷಿಕರಾಗಿರುವ ಕಾಂತಪ್ಪ ಪೂಜಾರಿ ಅವರಿಗೆ ಹಸುವನ್ನು ಉಡುಗೊರೆಯಾಗಿ ನೀಡಿದ್ದೇವೆ. ಜತೆಗೆ ಕಲ್ಪವೃಕ್ಷವೂ ಆಗಿರುವ ತೆಂಗಿನ ಸಸಿಯನ್ನೂ ನೀಡಿದ್ದೇವೆ.
|ದಿನೇಶ್ ಸುವರ್ಣ ಕುದ್ಕೋಳಿ ತಂಡದ ಮುಖ್ಯಸ್ಥ