ಠಾಣೆ ಆವರಣದಲ್ಲಿಯೇ ಜನಿಸಿದ ‘ಮೇರಿ’

ನರಗುಂದ: ಅಕ್ರಮ ಗೋವು ಸಾಗಾಣಿಕೆ ಪ್ರಕರಣದಡಿ ಪೊಲೀಸರು ವಶಪಡಿಸಿಕೊಂಡಿದ್ದ, ಮೂರು ಗೋವುಗಳಲ್ಲಿ ತುಂಬು ಗರ್ಭ ಧರಿಸಿದ್ದ ಹಸುವೊಂದು ನರಗುಂದ ಪೊಲೀಸ್ ಠಾಣೆ ಆವರಣದಲ್ಲಿಯೇ ಹೆಣ್ಣು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ಬದಾಮಿ ತಾಲೂಕು ಕೆರೂರಿನಿಂದ ನರಗುಂದ ಮಾರ್ಗವಾಗಿ ಗೋಕಾಕಗೆ ಟಾಟಾ ಏಸ್ ವಾಹನದಲ್ಲಿ ರಾಜಭಕ್ಷ ಜಾತಿಗೇರ, ವಾಹನ ಚಾಲಕ ಪರಶುರಾಮ ಜೋಕೀರ ಎಂಬುವರು ಮೂರು ಹಸುಗಳನ್ನು ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಪಟ್ಟಣದ ಕೆಲ ಸಾರ್ವಜನಿಕರು ಪಟ್ಟಣದ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ 7 ಗಂಟೆಗೆ ವಾಹನ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೋಲಿಸರು ವಿಚಾರಣೆ ವೇಳೆ ಗೋವು ಸಾಗಾಣಿಕೆಗೆ ಯಾವುದೇ ಪರವಾನಗಿ ಪಡೆದಿರಲಿಲ್ಲ. ಹಿಂಸಾತ್ಮಕವಾಗಿ ಒಂದೇ ಟಾಟಾ ಏಸ್ ವಾಹನದಲ್ಲಿ ಮೂರು ಗೋವು ಸಾಗಾಣಿಕೆ ಮತ್ತಿತರ ಕಾನೂನು ಉಲ್ಲಂಘನೆ ಆರೋಪದಡಿ ಇಬ್ಬರನ್ನು ಬಂಧಿಸಿ, ವಾಹನ ಮತ್ತು ಹಸುಗಳನ್ನು ವಶಕ್ಕೆ ಪಡೆದಿದ್ದರು. ಮೊದಲೇ ತುಂಬು ಗರ್ಭ ಧರಿಸಿದ್ದ ಮೂರು ಗೋವುಗಳಲ್ಲಿ ಒಂದು ಗೋವು ಮಂಗಳವಾರ ಬೆಳಗ್ಗೆ ಪೊಲೀಸ್ ಠಾಣೆ ಆವರಣದಲ್ಲಿಯೇ ಹೆಣ್ಣು ಕರುವಿಗೆ ಜನ್ಮ ನೀಡಿದೆ.

ಕ್ರಿಸ್​ವುಸ್ ಹಬ್ಬದಂದು ಗೋವು ಜನ್ಮ ನೀಡಿದ್ದರಿಂದ ಪೊಲೀಸ್ ಸಿಬ್ಬಂದಿ ಕರುವಿಗೆ ಮೇರಿ ಸ್ಟೇನೋ ಎಂದು ನಾಮಕರಣ ಮಾಡಿ ಗೋ ಪ್ರೇಮ ಮೆರೆದಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆ ಹಾಗೂ ಕರು ಸೇರಿ ಮೂರು ಗೋವುಗಳ ಸರಂಕ್ಷಣೆ ದೃಷ್ಟಿಯಿಂದ ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠ ಗುರುಸಿದ್ಧಶಿವಯೋಗಿ ಶಿವಾಚಾರ್ಯ ಶ್ರೀಗಳ ಅನುಮತಿ ಮೇರೆಗೆ ಮಠದ ಸುಪರ್ದಿಗೆ ಒಪ್ಪಿಸಲಾಗಿದೆ.

ವಿಜಯ ಮಾನೆ ಎಂಬುವರು ದೂರು ಸಲ್ಲಿಸಿದ್ದು, ಸಿಪಿಐ ಸುಧೀರಕುಮಾರ್ ಬೆಂಕಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.