ಪ್ಯಾನಿಕ್ ಆಗದೆ ಜಾಗರೂಕರಾಗಿರಲು ತಜ್ಞರ ಸಲಹೆ
ಪಂಕಜ ಕೆ.ಎಂ. ಬೆಂಗಳೂರು
ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಕಳೆದ ಹತ್ತು ದಿನಗಳಲ್ಲಿ 10 ಪಟ್ಟು ಏರಿಕೆ ಕಂಡಿವೆ. ಡಿ.23ರಂದು 104 ಇದ್ದ ಸೋಂಕಿತರ ಸಂಖ್ಯೆ ಜ.1ರಂದು 1,245ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ 11 ಸಾವು ವರದಿಯಾಗಿವೆ. ಅದರಲ್ಲಿ ಮೂರು ಜೆಎನ್ 1 ಕೋವಿಡ್ ಉಪತಳಿ ಒಮಿಕ್ರಾನ್‌ನ ರೂಪಾಂತರಿಯಾಗಿದೆ. ಈ ರೂಪಾಂತರಿ ವೇಗವಾಗಿ ಹರಡುತ್ತದಾದರೂ, ಪರಿಣಾಮಕಾರಿ ಅಲ್ಲವಾದ್ದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿಲ್ಲ. ಸೋಮವಾರದ ವರೆಗೆ 66 ರೋಗಿಗಳು ದಾಖಲಾಗಿದ್ದು, 20 ಮಂದಿ ತುರ್ತು ನಿಗಾ ಘಟಕದಲ್ಲಿ, 46 ಮಂದಿ ಸಾಮಾನ್ಯವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸ ರೂಪಾಂತರಿ ತಳಿ ವಯಸ್ಸಾದವರು ಮತ್ತು ದೀರ್ಘಾಕಾಲೀನ ನಾನಾ ಆರೋಗ್ಯ ಸಮಸ್ಯೆ (ಕೊಮೊರ್ಬಿಡಿಟಿ ) ಹೊಂದಿರುವವರಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಪ್ರಕರಣಗಳ ಸಂಖ್ಯೆ 10 ಪಟ್ಟು ಏರಿಕೆಯಾಗಿದ್ದರೂ, ಇದನ್ನು ಒಂದು ಅಲೆ ಎಂದು ಕರೆಯಲಾಗದು. ಆದಾಗ್ಯೂ ಉಲ್ಬಣದ ತೀವ್ರತೆ ಅರ್ಥಮಾಡಿಕೊಳ್ಳಲು ಕೆಲ ವಾರ ಕಾದು ನೋಡಬೇಕಿದೆ ಎನ್ನುತ್ತಾರೆ ತಜ್ಞರು.
ಹೆಚ್ಚು ಪರೀಕ್ಷೆ, ಹೆಚ್ಚು ಸೋಂಕು: ಹೆಚ್ಚಿನ ಪರೀಕ್ಷೆಯೊಂದಿಗೆ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಕಾರಣ ಕೆಲ ತಿಂಗಳಿಂದ ‘ಸಾರಿ’ ಮತ್ತು ಐಎಲ್‌ಐ (ಉಸಿರಾಟದ ತೊಂದರೆ ಹಾಗೂ ಶೀತಜ್ವರ) ಪ್ರಕರಣಗಳನ್ನು ಪರೀಕ್ಷಿಸುತ್ತಿಲ್ಲ. ಈಗ ಕೇವಲ ರೋಗಲಕ್ಷಣ ಹೊಂದಿರುವ ‘ಸಾರಿ’ ಮತ್ತು ಐಎಲ್‌ಐ ರೋಗಿಗಳನ್ನು ಪರೀಕ್ಷಿಸುವುದು ಪರೀಕ್ಷಾ ಕಾರ್ಯತಂತ್ರವಾಗಿದೆ. ಅಲ್ಲದೆ, ಪ್ರಯಾಣ ಇತಿಹಾಸ ಹೊಂದಿರುವವರಿಗೆ ಹಾಗೂ ಸೋಂಕು ಸಂಪರ್ಕಿತರ ತಪಾಸಣೆ ಮಾಡುತ್ತಿಲ್ಲ. ಈ ಎಲ್ಲವನ್ನೂ ಮಾಡಲು ಪ್ರಾರಂಭಿಸಿದರೆ ಸೋಂಕು ಪ್ರಮಾಣ ದರ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ತಜ್ಞರು. ಜನರು ಪ್ಯಾನಿಕ್ ಆಗದೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸೇರಿ ಅಗತ್ಯ ಮುನ್ನೆಚ್ಚರಿಕೆ ಅನುಸರಿಸಬೇಕು ಎಂದಿದ್ದಾರೆ.