ಬೆಂಗಳೂರು: ಮುಖ್ಯಮಂತ್ರಿ ತರಾಟೆ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಹಾಸಿಗೆಗಳ ವಿವರ ಪ್ರಕಟಿಸಿದ್ದಾರೆ.
ಅದರಂತೆ ಒಟ್ಟು 5,859 ವಿವಿಧ ಬಗೆಯ ಹಾಸಿಗೆಗಳನ್ನು ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಆದರೆ, ಈವರೆಗೆ ಖಾಸಗಿ ಆಸ್ಪತ್ರೆಗಳು ಎಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಕಾಯ್ದಿರಿಸಿವೆ ಎಂಬ ಸಮರ್ಪಕ ಮಾಹಿತಿ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸೋಮವಾರ ನಡೆಸಿದ್ದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಬೆಂಗಳೂರು ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆಗಳು, ಅಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತ ವಿವರವನ್ನು ವಾರ್ ರೂಂ ವೆಬ್ ಸೈಟ್ (http://chbms.bbmpgov.in/portal/reports/index.html) ನಲ್ಲಿ ಬಿಬಿಎಂಪಿ ಪ್ರಕಟಿಸಿದೆ. ಅದರಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ? ಎಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಕರೊನಾಕ್ಕೆ ಹೆದರುವ ಅಗತ್ಯವಿಲ್ಲ..ಅದು ಇತರ ವೈರಾಣುಗಳಷ್ಟು ಪರಿಣಾಮಕಾರಿಯಲ್ಲ: ಡಾ.ಗಿರಿಧರ್ ಕಜೆ
102 ಆಸ್ಪತ್ರೆಗಳು: ನಗರದ ಬಹುತೇಕ ಆಸ್ಪತ್ರೆಗಳಲ್ಲೂ ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಕಾಯ್ದಿರಿಸಲಾಗಿದೆ. ಅದರಂತೆ ಅಪೋಲೊ, ಎಂ.ಎಸ್. ರಾಮಯ್ಯ ಆಸ್ಪತ್ರೆ ಸೇರಿ 102 ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.
299 ವೆಂಟಿಲೇಟರ್: ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 5,859 ಹಾಸಿಗೆ ಮತ್ತು ವೆಂಟಿಲೇಟರ್ಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ 3,150 ಸಾಮಾನ್ಯ ಹಾಸಿಗೆ, 2,092 ಹೈ-ಡಿಪೆಂಡೆನ್ಸಿ ಯೂನಿಟ್ (ಎಚ್ಡಿಯು), 318 ಐಸಿಯು ಹಾಗೂ 299 ವೆಂಟಿಲೇಟರ್ಗಳಾಗಿವೆ.
ಪ್ರತಿಕ್ಷಣ ಮಾಹಿತಿ ಅಪ್ಡೇಟ್: ಬಿಬಿಎಂಪಿ ಸಿದ್ಧಪಡಿಸಿರುವ ಡ್ಯಾಶ್ ಬೋರ್ಡ್ನಲ್ಲಿ ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಖಾಲಿಯಿವೆ ಎಂಬುದನ್ನು ಆಗಾಗ ಅಪ್ಡೇಟ್ ಮಾಡಲಾಗುತ್ತದೆ. ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ ನಂತರ ಖಾಲಿಯಾಗುವ ಹಾಸಿಗೆಗಳ ವಿವರವನ್ನು ಆ ಕ್ಷಣವೇ ಅಪ್ಡೇಟ್ ಮಾಡಲಾಗುತ್ತದೆ.