More

    ಲಾಕ್‌ಡೌನ್ ಮುನ್ನಾದಿನ ಖರೀದಿ ಭರಾಟೆ

    ಮಂಗಳೂರು/ಉಡುಪಿ: ವಾರಾಂತ್ಯ ಕರ್ಫ್ಯೂ ಮುಗಿದ ಬಳಿಕ ಕೋವಿಡ್ ಪ್ರಯುಕ್ತ ಸಾರ್ವಜನಿಕರ ಓಡಾಟ ಮತ್ತು ವ್ಯವಹಾರಗಳಿಗೆ ನಿರ್ಬಂಧ ಇದ್ದರೂ, ಸೋಮವಾರ ಮಂಗಳೂರು, ಉಡುಪಿ ಸಹಿತ ಉಭಯ ಜಿಲ್ಲೆಗಳಲ್ಲಿ ಜನ ಹಾಗೂ ವಾಹನ ದಟ್ಟಣೆ ಕಾಣಿಸಿಕೊಂಡಿತು. ಪರಿಷ್ಕೃತ ಮಾರ್ಗಸೂಚಿಯ ಗೊಂದಲ ಮತ್ತು 14 ದಿನಗಳ ಲಾಕ್‌ಡೌನ್ ಘೋಷಣೆ ಸುಳಿವಿನ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆ, ಅಂಗಡಿಗಳಿಗೆ ಖರೀದಿಗಾಗಿ ಮುಗಿಬಿದ್ದರು.

    ಮಂಗಳೂರಿನಲ್ಲಿ ಹೆಚ್ಚಿನ ವ್ಯಾಪಾರ ಮಳಿಗೆಗಳು ಮುಚ್ಚಿದ್ದರೂ ವಾಹನ ಹಾಗೂ ಜನ ದಟ್ಟಣೆ ಅಧಿಕವಿತ್ತು. ಇಲೆಕ್ಟ್ರಿಕಲ್, ಬಟ್ಟೆ ಅಂಗಡಿ, ಸೈಬರ್ ಸೆಂಟರ್‌ಗಳ ಪೈಕಿ ಕೆಲವು ಅರ್ಧ ಬಾಗಿಲು ತೆರೆದು ವ್ಯವಹಾರ ನಡೆಸಿದವು. ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ವಿರಳವಿದ್ದು, ಖಾಸಗಿ ವಾಹನಗಳು ಗರಿಷ್ಠ ಸಂಖ್ಯೆಯಲ್ಲಿ ಓಡಾಡುತ್ತಿದ್ದವು.

    ಉಡುಪಿಯಲ್ಲಿ ತೆರೆದಿದ್ದ ಚಪ್ಪಲಿ, ಬಟ್ಟೆ, ಚಿನ್ನಾಭರಣ, ಮೊಬೈಲ್ ರಿಚಾರ್ಜ್, ಫ್ಯಾನ್ಸಿ ಸ್ಟೋರ್ ಮತ್ತಿತರ ಅಂಗಡಿಗಳನ್ನು ಪೊಲೀಸರು, ನಗರಸಭೆ ಅಧಿಕಾರಿಗಳು ಬಂದ್ ಮಾಡಿಸಿದರು.
    ರೇಷನ್ ಖರೀದಿ ಹೆಚ್ಚಳ: ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ರೇಷನ್ ಖರೀದಿಸಿದರು. ಲಾಕ್‌ಡೌನ್ ವಿಚಾರ ತಿಳಿಯುತ್ತಿದ್ದಂತೆ ಬೇಳೆ, ಕಾಳು, ಸೋಪು, ಹಿಟ್ಟು, ಅಕ್ಕಿ ಮತ್ತಿತರ ಪದಾರ್ಥಗಳನ್ನು ಖರೀದಿಸಿದರು. ಹೋಲ್‌ಸೇಲ್ ದಿನಸಿ ವ್ಯಾಪಾರ ಅಂಗಡಿಗಳಲ್ಲಿಯೂ ವಹಿವಾಟು ಜೋರಾಗಿತ್ತು.

    ಮುಚ್ಚುತ್ತಿವೆ ಹೊಟೇಲ್‌ಗಳು: ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮುಂದುವರಿದಿದೆ. ಮುಂದಿನ 14 ದಿನ ಲಾಕ್‌ಡೌನ್ ಮಾರ್ಗಸೂಚಿ ಪ್ರಕಾರ ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಬಹುದು. ಆದರೆ ಜನರ ಓಡಾಟವೇ ಇಲ್ಲದಿದ್ದರೆ ವ್ಯಾಪಾರವಾಗದು ಎಂದು ಬಹುತೇಕ ಹೋಟೆಲ್ ಮಾಲೀಕರು ಸಿಬ್ಬಂದಿಗೆ ರಜೆ ನೀಡಿ ಊರಿಗೆ ಕಳುಹಿಸಲು ಮುಂದಾಗಿದ್ದಾರೆ.

    ದೂರದೂರುಗಳಿಗೆ ಹೆಚ್ಚುವರಿ ಬಸ್: ಸೋಮವಾರ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಿವೆ. ಮಂಗಳವಾರ ರಾತ್ರಿಯಿಂದ ನಿರ್ಬಂಧ ವಿಸ್ತರಣೆಯಾಗುವ ತೀರ್ಮಾನ ಪ್ರಕಟವಾಗುತ್ತಿದ್ದಂತೆ ಸೋಮವಾರ ಮತ್ತು ಮಂಗಳವಾರ ರಾತ್ರಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಆಗಮಿಸುವ ಮತ್ತು ಇಲ್ಲಿಂದ ಹೊರಡುವ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಇವೆರಡು ದಿನಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ. ಉಡುಪಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಊರಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಟ್ಟೆ ಮಳಿಗೆ, ಇಲೆಕ್ಟ್ರಾನಿಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಮಲ್ಪೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದವರು, ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಸ್ಸಿಗಾಗಿ ಕಾಯುತ್ತಿದ್ದರು.

    ಮದ್ಯ ಖರೀದಿಗೆ ಮುಗಿಬಿದ್ರು!: ಸೋಮವಾರ ಮಧ್ಯಾಹ್ನ ವೇಳೆ ಪಾನಪ್ರಿಯರು ಮದ್ಯದಂಗಡಿಗಳಿಗೆ ಮುಗಿಬಿದ್ದರು. ಉಡುಪಿಯಲ್ಲಿ ಸರತಿ ಸಾಲಿನಲ್ಲಿ ನಿಂತು ನಗರದ ಮದ್ಯದಂಗಡಿ, ಎಂಆರ್‌ಪಿ ಮಳಿಗೆಗಳಲ್ಲಿ ಕೇಸ್‌ಗಟ್ಟಲೆ ಮದ್ಯದ ಬಾಟಲಿ ಖರೀದಿಸಿದರು. ಆದರೆ ಮಂಗಳೂರಿನಲ್ಲಿ ಇಂಥ ಸ್ಥಿತಿ ಕಂಡುಬಂದಿಲ್ಲ. ಲಾಕ್‌ಡೌನ್ ಅವಧಿಯಲ್ಲೂ ಬೆಳಗ್ಗೆ 6ರಿಂದ 10 ಗಂಟೆ ತನಕ ಮದ್ಯದಂಗಡಿ ತೆರೆದಿರುವುದರಿಂದ ನಿರಾಳರಾಗಿದ್ದಾರೆ.

    ಪುತ್ತೂರು ಸಂತೆಗೆ ಅನುಮತಿ!: ಪುತ್ತೂರು: ಸೋಮವಾರ ಪುತ್ತೂರಿನ ವಾರದ ಸಂತೆ ನಡೆಯಿತು. ಗ್ರಾಹಕರು ಮತ್ತು ವ್ಯಾಪಾರಿಗಳು ಮಾರ್ಗಸೂಚಿ ಅನುಸರಿಸಿದರು. ಕಿಲ್ಲೆ ಮೈದಾನದ ಸುತ್ತಲಿನ ರಸ್ತೆಬದಿಗಳಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ಎಲ್ಲ ಬೀದಿಬದಿ ಸಂತೆ ವ್ಯಾಪಾರಿಗಳನ್ನು ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ರಖಂ ಮತ್ತು ಚಿಲ್ಲರೆ ವ್ಯಾಪಾರದ ಸಂತೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts