ಅಧೀನ ನ್ಯಾಯಾಲಯಗಳಲ್ಲಿ 5,133 ಹುದ್ದೆಗಳು ಖಾಲಿ: ಸುಮೊಟೊ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ನವದೆಹಲಿ: ದೇಶಾದ್ಯಂತ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 5,133 ಹುದ್ದೆಗಳು ಖಾಲಿ ಇದ್ದು, ಇಷ್ಟು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಸೋಮವಾರ ತಿಳಿಸಿದೆ.

ಕೆಳಗಿನ ನ್ಯಾಯಾಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ಹಾಗೂ ನ್ಯಾಯಮೂರ್ತಿ ಸಂಜಯ್​ ಕಿಶನ್​ ಕೌಲ್​ ಅವರನ್ನೊಳಗೊಂಡ ಪೀಠ ಸುಮೊಟೊ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ಬಗ್ಗೆ ಆಯಾ ರಾಜ್ಯಗಳ ಹೈಕೋರ್ಟ್​ ಮತ್ತು ರಾಜ್ಯ ಸರ್ಕಾರಗಳಿಂದ ಸಂಪೂರ್ಣ ಮಾಹಿತಿ ಕೇಳಿದೆ.

ದೇಶದಲ್ಲಿ ಒಟ್ಟಾರೆ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳು ಸೇರಿ 22,036 ಹುದ್ದೆಗಳು ಇವೆ. ಅವುಗಳಲ್ಲಿ 5,133 ಪೋಸ್ಟ್​ಗಳು ಖಾಲಿ ಇವೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ನ್ಯಾಯಮೂರ್ತಿಗಳ ಪೀಠವು ಸುಪ್ರೀಂಕೋರ್ಟ್​ನ ನೋಂದಣಿ ಕಚೇರಿಯಿಂದ ಮಾಹಿತಿ ಸಂಗ್ರಹ ಮಾಡಿದೆ. ವಿವಿಧ ರಾಜ್ಯಗಳ ಹೈಕೋರ್ಟ್​ಗಳು, ಸದ್ಯ 4180 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹಾಗೇ ಬೇರೆಬೇರೆ ರಾಜ್ಯಗಳಲ್ಲಿ ಈ ನೇಮಕಾತಿ ಕ್ರಿಯೆ ವಿವಿಧ ಹಂತದಲ್ಲಿ ನಡೆಯುತ್ತಿದೆ ಎಂದು ವಿವರಣೆ ನೀಡಿವೆ.

ಉನ್ನತ ಹಾಗೂ ಅಧೀನ ನ್ಯಾಯಾಲಯಗಳ ಹುದ್ದೆ ನೇಮಕಾತಿಗೆ ಯಾವ ದಿನಾಂಕದಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ? ಅದು ಯಾವಾಗ ಪೂರ್ಣಗೊಳ್ಳುತ್ತದೆ? ಎಂಬುದನ್ನು ಆಯಾ ರಾಜ್ಯಗಳ ಹೈಕೋರ್ಟ್​ ಹಾಗೂ ಸರ್ಕಾರಗಳು ಸುಪ್ರೀಂಕೋರ್ಟ್​ಗೆ ತಿಳಿಸಬೇಕು ಎಂದು ಕೂಡ ಪೀಠ ಪ್ರಶ್ನೆ ಮಾಡಿದೆ.

ಒಂದೊಮ್ಮೆ ನೇಮಕಾತಿ ಪೂರ್ಣಗೊಳಿಸಲು ಸುಪ್ರೀಂಕೋರ್ಟ್​ ನಿಗದಿ ಮಾಡುವ ಸಮಯವನ್ನು ಮೀರಿದರೆ, ಅದಕ್ಕೆ ಹೈ ಕೋರ್ಟ್​ ಅಥವಾ ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಒದಗಿಸುವ ಕಾರಣಗಳನ್ನು ಪರಿಗಣಿಸಿ, ಸಾರ್ವಜನಿಕ ಸೇವಾ ಆಯೋಗದಿಂದ ನೇಮಕಾತಿ ನಡೆಸಲಾಗುವುದು ಎಂದು ಪೀಠ ಹೇಳಿದೆ.

ಹಾಗೇ ನ್ಯಾಯಾಧೀಶರ ಹುದ್ದೆಗಳ ನೇಮಕಾತಿಗೆ ನೀಡಲಾದ ಸಮಯವನ್ನು ಇನ್ನೂ ಸಂಕ್ಷಿಪ್ತಗೊಳಿಸಬಹುದೇ? ಕೊಟ್ಟ ಸಮಯದ ಒಳಗಡೆ ನೇಮಕಾತಿ ಮುಗಿಯುತ್ತದೆ ಎಂದು ಭಾವಿಸಬಹುದೇ ಎಂದು ಪ್ರಶ್ನಿಸಿದೆ.
ಅಕ್ಟೋಬರ್​ 31ರೊಳಗೆ ಎಲ್ಲ ಹೈಕೋರ್ಟ್​ ಹಾಗೂ ರಾಜ್ಯ ಸರ್ಕಾರಗಳು ಮಾಹಿತಿ ನೀಡಬೇಕು ಎಂದು ಸುಪ್ರೀಂಕೋರ್ಟ್​ ಹೇಳಿತ್ತು. ಹಾಗೇ ವಿಚಾರಣೆಯನ್ನು ನವೆಂಬರ್​ 1ಕ್ಕೆ ಮುಂದೂಡಿದೆ.