ಕೋರ್ಟ್​ ಕಲಾಪಗಳ ನೇರಪ್ರಸಾರಕ್ಕೆ ಅಸ್ತು ಎಂದ ಸುಪ್ರೀಂ

ನವದೆಹಲಿ: ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಟಿ.ವಿ.ಗಳಲ್ಲಿ ನೇರಪ್ರಸಾರ​ ಕೊಡುವುದು ತಪ್ಪಲ್ಲ. ಅದಕ್ಕೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ. ಸರಣಿ ತೀರ್ಪುಗಳನ್ನು ನೀಡಿದ ಕೋರ್ಟ್​ ಅವುಗಳ ಮಧ್ಯೆ ಇದೊಂದು ಮಹತ್ವದ ತೀರ್ಪು ನೀಡಿದೆ.
ಸಾರ್ವಜನಿಕರಿಗೆ ನ್ಯಾಯಾಲಯದ ಕೋಣೆಯೊಳಗೆ ಏನು ಆಗುತ್ತಿದೆ. ಹೇಗೆ ವಾದ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂಬುದನ್ನು ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ.

ಪೀಠದ ನೇತೃತ್ವ ವಹಿಸಿದ್ದ ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ, ಸೂರ್ಯನ ಬೆಳಕು ಅತ್ಯುತ್ತಮ ಸೋಂಕು ನಿವಾರಕ (“Sunlight is the best disinfectant). ಇದರಿಂದ ನ್ಯಾಯಾಂಗದಲ್ಲಿ ಪಾರದರ್ಶಕತೆ ತಂದಂತಾಗುವುದು. ಕೋರ್ಟ್​ನಲ್ಲಿ ನಡೆಯುವ ವಿಚಾರಣೆಗಳನ್ನು ಮಾಧ್ಯಮಗಳಲ್ಲಿ ಲೈವ್​ ಕೊಟ್ಟರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಬರುವುದು ಎಂದು ಹೇಳಿದರು.

ನೇರಪ್ರಸಾರ ಕೊಡುವಂತೆ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್, ಕಾನೂನು ವಿದ್ಯಾರ್ಥಿ ಸ್ನೇಹಿಲ್ ತ್ರಿಪಾಠಿ, ಎನ್​ಜಿಒ ಸಲ್ಲಿಸಿದ್ದ ಅರ್ಜಿಗಳನ್ನು ಜುಲೈನಲ್ಲಿ ಪರಿಶೀಲನೆಗೆ ಕೈಗೆತ್ತಿಕೊಂಡ ವೇಳೆ ದೀಪಕ್​ ಮಿಶ್ರಾ, ಕೋರ್ಟ್ ವಿಚಾರಣೆ ಗಳನ್ನು ನಡೆಸುವಾಗ ಮಾಧ್ಯಮಗಳು ಲೈವ್​ ಕೊಡುವಂತಿರಬೇಕು. ಕಕ್ಷಿಗಾರರರು ಅವರ ಪ್ರಕರಣಗಳು ಹೇಗೆ ಬಗೆಹರಿಯಲ್ಪಡುತ್ತವೆ, ವಾದ-ಪ್ರತಿವಾದ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಲು ಅರ್ಹರಾಗಿದ್ದಾರೆ ಎಂದಿದ್ದರು.

ಎಲ್ಲವೂ ಅಲ್ಲದಿದ್ದರೂ, ಅತ್ಯಾಚಾರ, ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ನಡೆಯುವ ವಿಚಾರಣೆಗಳನ್ನಾದರೂ ಇದರ ವ್ಯಾಪ್ತಿಗೆ ತರಬೇಕು. ಅಲ್ಲದೆ ಹೀಗೆ ನೇರಪ್ರಸಾರ ಕೊಡುವುದರಿಂದ ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದರು.