ಲಿವ್​ಇನ್ ಸಂಗಾತಿ ಪತಿಯಲ್ಲ!

| ಜಗನ್ ರಮೇಶ್

ಬೆಂಗಳೂರು: ಪರಸ್ತ್ರೀ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ತನ್ನ ಪತಿ ಎಂದು ಹೇಳಿಕೊಂಡ ವ್ಯಕ್ತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬಳು ನ್ಯಾಯಾಲಯದಲ್ಲಿ ತನ್ನ ಮದುವೆಯೇ ಕಾನೂನುಬದ್ಧ ಎಂಬುದನ್ನು ಸಾಬೀತುಪಡಿಸಲಾಗದೆ ಮುಖಭಂಗ ಅನುಭವಿಸಿದ್ದಾಳೆ. ಈಕೆಯ ಅರ್ಜಿಯನ್ನು ವಜಾಗೊಳಿಸಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪತಿಯಲ್ಲದವನ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅನುಸಾರ ಪ್ರಕರಣ ದಾಖಲಿಸಲು ಅವಕಾಶ ಇಲ್ಲವೆಂಬುದನ್ನು ಸ್ಪಷ್ಟಪಡಿಸಿದೆ.

ಮಹಿಳೆ ದೂರೇನು?: ‘ನಾವಿಬ್ಬರು 1999ರಲ್ಲಿ ಮಂಡ್ಯದ ಆದಿಚುಂಚನಗಿರಿ ದೇವಾಲಯದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆ ಆದ ಬಳಿಕ ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದೇವೆ. ನಮಗೆ ಮಗಳಿದ್ದಾಳೆ. ಖಾಸಗಿ ಸಂಸ್ಥೆಯಲ್ಲಿ ಚಾಲಕನಾಗಿದ್ದ ಪತಿ 2010ರವರೆಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ನಂತರ ಕುಡಿತಕ್ಕೆ ಬಲಿಯಾಗಿ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ತವರುಮನೆಯಿಂದ 2 ಲಕ್ಷ ರೂ. ತರುವಂತೆ ಮಾನಸಿಕ-ದೈಹಿಕ ಹಿಂಸೆ ನೀಡುತ್ತಿದ್ದ. ಈ ಮಧ್ಯೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧ ಬೆಳೆಸಿ ವಿಚ್ಛೇದನ ನೀಡುವಂತೆ ಒತ್ತಾಯಿಸುವುದಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಸುತ್ತಿದ್ದ.

ಹೀಗಾಗಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆ. ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಪತಿ, ದೂರು ದಾಖಲಿಸಿದ ದ್ವೇಷದಿಂದ ನನ್ನಿಂದ ದೂರ ಉಳಿದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಯೊಂದಿಗೇ ನೆಲೆಸಿದ್ದಾನೆ. ಮಗಳ ವಿದ್ಯಾಭ್ಯಾಸಕ್ಕೂ ಹಣ ನೀಡುತ್ತಿಲ್ಲ. ಜೀವನ ನಿರ್ವಹಣೆಗೆ ತೊಂದರೆಯಾಗಿದೆ’

ಪತ್ನಿಯೇ ಅಲ್ಲ ಎಂದ: ಆದರೆ ಆರೋಪಿ ಮಹಿಳೆಯ ಹೇಳಿಕೆಯನ್ನು ಪತಿ ಎನ್ನಲಾದ ವ್ಯಕ್ತಿ ಅಲ್ಲಗಳೆದಿದ್ದ. ‘ಅರ್ಜಿದಾರ ಮಹಿಳೆ ನನ್ನ ಹೆಂಡತಿಯೇ ಅಲ್ಲ. ಹೀಗಾಗಿ ಅವಳಿಗೆ ನಾನು ಜೀವನಾಂಶ ನೀಡುವ ಅಗತ್ಯವಿಲ್ಲ. 1994ರ ಜೂ. 1ರಂದು ಮದುವೆಯಾಗಿರುವ ನಾನು ಪತ್ನಿ ಹಾಗೂ ಇಬ್ಬರು ಪುತ್ರಿಯರ ಜತೆ ಸುಖೀಜೀವನ ನಡೆಸುತ್ತಿದ್ದೇನೆ’ ಎಂದು ನ್ಯಾಯಾಲಯದ ವಿಚಾರಣೆ ವೇಳೆ ತಿಳಿಸಿದ್ದ. ‘ಅರ್ಜಿದಾರ ಮಹಿಳೆಯ ಸಂಬಂಧಿಯೊಬ್ಬರು ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೇ ಚಾಲಕರಾಗಿದ್ದರು. ಅವರಿಂದ ನನ್ನ ಬಗ್ಗೆ ಮಾಹಿತಿ ಸಂಗ್ರಹಿಸಿ, ನಕಲಿ ದಾಖಲೆ ಸೃಷ್ಟಿಸಿ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ’ ಎಂದು ಆಕ್ಷೇಪಿಸಿದ್ದ ವ್ಯಕ್ತಿ, ತನ್ನ ಮದುವೆಯ ಆಮಂತ್ರಣ ಪತ್ರಿಕೆ, ಫೋಟೋ, ಮಕ್ಕಳ ಜನನ ಪ್ರಮಾಣಪತ್ರ, ಪಡಿತರ ಚೀಟಿಯ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ.

ಸಾಕ್ಷ್ಯ ನೀಡದ ಮಹಿಳೆ

ಆದಿಚುಂಚನಗಿರಿ ದೇವಸ್ಥಾನದಲ್ಲಿ 1999ರ ನ.25ರಂದು ಮದುವೆಯಾಗಿರುವುದಾಗಿ ಹೇಳಿರುವ ಮಹಿಳೆ, ಆಮಂತ್ರಣ ಪತ್ರಿಕೆ ಮುದ್ರಿಸಿರಲಿಲ್ಲ, ಫೋಟೋ-ವೀಡಿಯೋ ತೆಗೆದಿರಲಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಳು. ಮಹಿಳೆ ಪರ ಸಾಕ್ಷಿಗಳೂ ಮದುವೆಗೆ ಕೇವಲ ಬಾಯಿಮಾತಿನಲ್ಲಿ ಕರೆಯಲಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಸುಪ್ರೀಂ ತೀರ್ಪು ಉಲ್ಲೇಖ

ಎಲ್ಲ ಲಿವಿಂಗ್ ಟುಗೆದರ್ ಸಂಬಂಧಗಳೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಯೋಜನ ಪಡೆಯಬಹುದಾಗಿರುವುದಿಲ್ಲ. ಒಂದು ವೇಳೆ ಅಂಥ ಪ್ರಯೋಜನಗಳನ್ನು ಪಡೆಯಬೇಕೆಂದರೆ, ಸೂಕ್ತ ಪುರಾವೆಗಳೊಂದಿಗೆ ಆ ಸಂಬಂಧವನ್ನು ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಾಲಯ, ಮಹಿಳೆಯ ಅರ್ಜಿ ವಜಾಗೊಳಿಸಿದೆ.

ಮಹಿಳೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನೂ ದಾಖಲಿಸಿದ್ದು, ಅದರ ರದ್ದುಕೋರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇಬ್ಬರೂ ಪತಿ-ಪತ್ನಿ ಎಂಬುದಕ್ಕೆ ಸಾಕ್ಷ್ಯ ಇಲ್ಲದೆ ಇರುವಾಗ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲು ಹೇಗೆ ಸಾಧ್ಯವೆಂದು ಪ್ರಶ್ನಿಸಿರುವ ಹೈಕೋರ್ಟ್, ಎಫ್​ಐಆರ್​ಗೆ ತಡೆಯಾಜ್ಞೆ ನೀಡಿದೆ. ಇದೀಗ, ಮಹಿಳೆಯ ಅರ್ಜಿ ವಜಾಗೊಳಿಸಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರತಿಯನ್ನು ಉಚ್ಚನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

| ಡಿ. ಮೋಹನ್ ಕುಮಾರ್, ಪತಿಯ ಪರ ವಕೀಲ