ಎಚ್​ಐವಿ ಪೀಡಿತೆ ರಾಜೀನಾಮೆ ಪಡೆದಿದ್ದ ಕಂಪನಿಯೇ ಕೆಲಸ ನೀಡುವಂತೆ ನ್ಯಾಯಾಲಯ ಆದೇಶ

ಪುಣೆ: ಎಚ್​ಐವಿ ಸೋಂಕು ತಗುಲಿದ್ದರಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಮೂರು ವರ್ಷಗಳ ನಂತರ ಲೇಬರ್​ ಕೋರ್ಟ್​ನಿಂದ ನ್ಯಾಯ ಸಿಕ್ಕಿದೆ.

ಪ್ರಕರಣದ ಕುರಿತು ಸೋಮವಾರ ತೀರ್ಪು ನೀಡಿದ ನ್ಯಾಯಾಲಯ, ಮೂರು ವರ್ಷದ ಹಿಂದೆ ಮಹಿಳೆಗೆ ಯಾವ ಹುದ್ದೆ ನೀಡಿದ್ದಿರೋ ಮತ್ತೆ ಅದೇ ಹುದ್ದೆ ನೀಡಬೇಕು. ಜತೆಗೆ ಆಕೆಗೆ ಇಷ್ಟು ವರ್ಷದ ವೇತನವನ್ನು ನೀಡಬೇಕು ಎಂದು ಕಂಪನಿಗೆ ಆದೇಶಿಸಿದೆ.

ಎಚ್​ಐವಿ ಸೋಂಕು ತಗುಲಿರುವುದು ಖಚಿತವಾದ ನಂತರ 2015ರಲ್ಲಿ ಸೋಂಕು ತಗುಲಿದ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ವೈದ್ಯಕೀಯ ಸೌಲಭ್ಯ ಪಡೆಯಲು, ವರದಿಗಳನ್ನು ಸಲ್ಲಿಸಲು ಮುಂದಾಗುತ್ತಾಳೆ. ಆದರೆ ತಮ್ಮ ಸಿಬ್ಬಂದಿಗೆ ಎಚ್​ಐವಿ ಇರುವುದು ತಿಳಿಯುತ್ತಿದ್ದಂತೇ, ವ್ಯವಸ್ಥಾಪಕರು ಕೂಡಲೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.

ಸೋಂಕು ತಗುಲಿದ ಬಗ್ಗೆ ನನ್ನನ್ನು ಪ್ರಶ್ನಿಸಿದಾಗ, ನನ್ನ ಪತಿಯಿಂದಲೇ ನನಗೆ ಈ ಸೋಂಕು ತಗುಲಿದೆ ಎಂದು ಹೇಳಿದೆ. ಎಲ್ಲವನ್ನೂ ವಿವರಿಸಿದ ನಂತರ 30 ನಿಮಿಷದೊಳಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು ಎಂದು ಮಹಿಳೆ ಘಟನೆ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ.

ಎಚ್​ಐವಿ ಸೋಂಕು ತಗುಲಿದ್ದ ಮಹಿಳೆಯ ಪತಿ ಮೃತಪಟ್ಟಿದ್ದು, ಅತ್ತೆ-ಮಾವ ಕೂಡ ಸಂತ್ರಸ್ತೆಯನ್ನು ಮನೆಯಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)