ಚನ್ನಗಿರಿ: ವಿಶ್ವ ಸಂಪನ್ಮೂಲ ಸಂಸ್ಥೆ ವಾಟರ್ ಅಟ್ಲಾಸ್ ವರದಿಯ ಪ್ರಕಾರ ಅತೀ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ದೇಶಗಳಲ್ಲಿ ಭಾರತ 13ನೇ ಸ್ಥಾನ ಪಡೆದಿದೆ. 2050ರ ವೇಳೆಗೆ ನೀರಿನ ಸಮಸ್ಯೆ ಶೇ.50 ರಷ್ಟು ಅಧಿಕವಾಗಲಿದೆ ಎಂದು ನ್ಯಾಯಧೀಶರಾದ ಶ್ರೀವತ್ಸ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಪುರಸಭೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರಿನ ಸಮಸ್ಯೆ ಜಾಗತಿಕ ಸಮಸ್ಯೆಯಾಗುತ್ತಿದೆ. ಕೈಗಾರಿಕೆ, ಕೃಷಿ ಹಾಗೂ ಆರ್ಥಿಕತೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅತಿಯಾದ ಬಳಕೆ, ಪೋಲು ಮಾಡುವುದು, ಹವಾಮಾನ ಬದಲಾವಣೆ ಸೇರಿ ಅನೇಕ ಕಾರಣದಿಂದ ನೀರಿನ ಕೊರತೆ ಉಂಟಾಗಿದೆ ಎಂದರು.
ವಿಶ್ವಸಂಸ್ಥೆ ಪ್ರಕಾರ ಪರಿಸರ ನೈರ್ಮಲ್ಯ, ಸ್ವಚ್ಚತೆ, ಶುದ್ಧ ನೀರಿನ ಕೊರತೆಯಿಂದ ಪ್ರತಿ ವರ್ಷ 14 ಲಕ್ಷ ಜನರು ಸಾಯುತ್ತಿದ್ದಾರೆ. ದೇಶದ ಶೇ.25ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಅರ್ಧದಷ್ಟು ಜನರಿಗೆ ಶೌಚಗೃಹ ದೊರೆತಿಲ್ಲ. ನಾವು ಇಂದಿನಿಂದಲೇ ನೀರನ್ನು ಸಮರ್ಪಕವಾಗಿ ಬಳಕೆ ಮಾಡದೆ ಹೋದರೆ ಭವಿಷ್ಯದಲ್ಲಿ ಕುಡಿಯಲು ನೀರು ಸಿಗುವುದು ಕಷ್ಟವಾಗುತ್ತದೆ. ನೀರಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ಎಂ. ರಾಜಪ್ಪ, ಉಪಾಧ್ಯಕ್ಷ ಆರ್.ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಪ್ರಸನ್ನಕುಮಾರ್ ಇದ್ದರು.