ಕಳಸದಲ್ಲಿ ಮತ್ತೆ ಜೀವ ಪಡೆದ ಇನಾಂ ಭೂಮಿ ವಿವಾದ, ನವೆಂಬರ್ 5 ರಂದು ಸುಪ್ರಿಂ ಕೋರ್ಟ್​ನಲ್ಲಿ ವಿಚಾರಣೆ

ಕಳಸ: ತಾಲೂಕಿನ ನೂರಾರು ಕುಟುಂಬಗಳಿಗೆ ಕಂಟಕವಾಗಿರುವ ಇನಾಂ ಭೂಮಿ ವಿವಾದ ನ.5 ರಂದು ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆಗೆ ಬರುವುದರಿಂದ ತಾಲೂಕಿನಲ್ಲಿ ಮತ್ತೆ ಭಯದ ವಾತಾವರಣ ನಿರ್ವಣವಾಗಿದೆ.

ಸದಾ ಸಮಸ್ಯೆ ಸುಳಿಯಲ್ಲಿ ಒದ್ದಾಡುತ್ತಿರುವ ತಾಲೂಕಿನ ಜನತೆಗೆ ಇನಾಂ ಭೂಮಿ ವಿವಾದ ದೊಡ್ಡ ಕಂಟಕವಾಗಿತ್ತು. 1998ರಲ್ಲಿ ಆರಂಭವಾದ ವಿವಾದ 2013ರಲ್ಲಿ ಹೈಕೋರ್ಟ್ ರೈತರ ವಿರುದ್ಧ ತೀರ್ಪು ನೀಡಿತ್ತು. ಈ ಬಗ್ಗೆ ಶ್ರೀ ಕಲಶೇಶ್ವರ ಸ್ವಾಮಿ ಇನಾಂ ಭೂಮಿ ಸಂತ್ರಸ್ತರ ಹೋರಾಟ ಸಮಿತಿ 2014ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರಿಂಕೋರ್ಟ್ ತೀರ್ಪು ನೀಡುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿತ್ತು. ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರ ಇನಾಂ ಭೂಮಿ ಸಂತ್ರಸ್ತರ ಪರವಾಗಿ ಅಫಿಡವಿಟ್ ಸಲ್ಲಿಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.

ಇನಾಂ ಭೂಮಿ ವ್ಯಾಪ್ತಿಯಲ್ಲಿ 620 ಕುಟುಂಬಗಳ 6,777 ಎಕರೆ ಜಾಗವಿದೆ. ನ್ಯಾಯಾಲಯದಲ್ಲಿ ಈ ಭೂಮಿ ಇನಾಂ ಭೂಮಿ ಎಂದು ಖಚಿತವಾದರೆ ಇವರ ಬದುಕು ಹಸನಾಗುತ್ತದೆ. ಇಲ್ಲವಾದರೆ ಈ ಕುಟಂಬಗಳ ಜೀವನ ನರಕ ಸದೃಶ. ನ್ಯಾಯಾಲಯಕ್ಕೆ ವಸ್ತು ಸ್ಥಿತಿ ವಿವರಿಸುವ ಸರ್ಕಾರದ ಕಾರ್ಯತಂತ್ರ ಹಾಗೂ ನ್ಯಾಯಾಧೀಶರ ಆದೇಶದ ಮೇಲೆ ಇವರ ಭವಿಷ್ಯ ನಿಂತಿದೆ.

ಇನಾಂ ಭೂಮಿ ವ್ಯಾಪ್ತಿಗೆ ಬರುವ ಗ್ರಾಮಗಳಾದ ಮಾವಿನಕೆರೆ-ತಲಗೋಡು, ತೋಟದೂರು, ಕರಿಮನೆ-ಕಲ್ಗೋಡು, ದೇವರಬೆಟ್ಟ, ಬಲಿಗೆ, ಬಾಳೆಹೊಳೆ, ಅಡುಕೋಡು, ಮುನ್ನೂರ್ ಪಾಲ್, ಹೆಬ್ಬಾಳೆ, ಹೊರಟ್ಟಿಮನೆ, ಕ್ಯಾತನಮಕ್ಕಿ, ತೋಡ್ಲು, ಹಳುವಳ್ಳಿ, ಕಾರಗದ್ದೆ, ಕಲ್ಕೋಡು, ಬರಗೋಡು, ಹಂದೆಡ್ಲು, ದೇವರಪಾಲು, ಬಲಿಗೆ, ಕೋಣೆಬೈಲು ಮತ್ತಿತರ ಹಳ್ಳಿಗಳ 620 ಕುಟುಂಬಗಳು 20 ವರ್ಷಗಳಿಂದ ಈ ಭೂಮಿ ಅರಣ್ಯ ಇಲಾಖೆ ಪಾಲಾಗುತ್ತದೆಯೇ ಎಂಬ ಭಯದಿಂದ ಕಾಲ ಕಳೆಯುತ್ತಿವೆ. ಮನೆ ನವೀಕರಿಸಲಾಗದೆ ಮುರುಕಲು ಗುಡಿಸಲಲ್ಲಿ ದಿನದೂಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಬರುವವರೆಗೆ ತಮಗಿರುವ ಜಮೀನನ್ನು ಖಾತೆ ಮಾಡಿಕೊಳ್ಳಲು ಸಾಧ್ಯವಾಗದೆ ಅತಂತ್ರರಾಗಿದ್ದಾರೆ.

Leave a Reply

Your email address will not be published. Required fields are marked *