ಸಚಿವ ಡಿಕೆ ಶಿವಕುಮಾರ್​ಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ದೆಹಲಿಯಲ್ಲಿನ ನಿವಾಸಗಳ ಮೇಲೆ ನಡೆಸಿದ ಐಟಿ ದಾಳಿ ಸಂಬಂಧ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯ ಸಚಿವರಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಆರೋಪಿಗಳಾಗಿದ್ದ ಡಿ.ಕೆ.ಶಿವಕುಮಾರ್, ಆಂಜನೇಯ, ರಾಜೇಂದ್ರ, ಸುನಿಲ್ ಶರ್ಮಾ ಅವರಿಗೆ ತಲಾ 25 ಸಾವಿರ ನಗದು ಶ್ಯೂರಿಟಿ ಹಾಗೂ ಒಂದು ಲಕ್ಷ ಬಾಂಡ್ ನೀಡಿ ಹಾಗೂ ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾ.ಎಂ.ಎಸ್.ಆಳ್ವ ಜಾಮೀನು ಮಂಜೂರು ಮಾಡಿದ್ದಾರೆ.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲ ನಾವಡಗಿ ಅವರು ಸಚಿವ ಡಿಕೆಶಿ ಉದ್ದೇಶ ಪೂರ್ವಕವಾಗಿ ತೆರಿಗೆ ವಂಚಿಸಿರುವುದು ಸಾಬೀತಾಗಿದೆ. ಜಾಮೀನು ನೀಡಿದರೆ ಅವರು ದೇಶ ತೊರೆದು ಹೋಗುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.