ಡಿಕೆಶಿ ಸದ್ಯ ನಿರಾಳ

ಬೆಂಗಳೂರು: ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದ 8.59 ಕೋಟಿ ರೂ.ಗೆ ಸಂಬಂಧಿಸಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದರಿಂದ ಅವರು ಸದ್ಯ ನಿರಾಳರಾಗಿದ್ದಾರೆ.

ಪ್ರಕರಣದ ಮೊದಲ ಆರೋಪಿ ಎ1 ಡಿ.ಕೆ. ಶಿವಕುಮಾರ್, ಎ2 ಸುನೀಲ್ ಶರ್ವ, ಎ3 ಆಂಜನೇಯ ಮತ್ತು ಎ4 ರಾಜೇಂದ್ರ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಸ್. ಆಳ್ವ ಜಾಮೀನು ಮಂಜೂರು ಮಾಡಿ ಶನಿವಾರ ಆದೇಶ ಹೊರಡಿಸಿದ್ದಾರೆ. ಜತೆಗೆ 25 ಸಾವಿರ ರೂ. ಶ್ಯೂರಿಟಿ ಮತ್ತು 1 ಲಕ್ಷ ರೂ. ಬಾಂಡ್ ನೀಡಲು ಸೂಚಿಸಿದ್ದಾರೆ. ಅಲ್ಲದೆ, ಸಾಕ್ಷಿಗಳ ಮೇಲೆ ಪರಿಣಾಮ ಬೀರಬಾರದು ಮತ್ತು ತನಿಖೆಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ವಾದ-ಪ್ರತಿವಾದ

ಶಿವಕುಮಾರ್ ಜಾಮೀನು ಅರ್ಜಿಗೆ ಐಟಿ ಪರ ವಕೀಲ ಎ.ಎ.ಜಿ. ಪ್ರಭುಲಿಂಗ ನಾವಡಗಿ ಆಕ್ಷೇಪಣೆ ವ್ಯಕ್ತಪಡಿಸಿದರು. ಐಟಿ ದಾಳಿ ವೇಳೆ ಕೋಟ್ಯಂತರ ಮೊತ್ತದ ವಹಿವಾಟು ಪತ್ತೆಯಾಗಿದ್ದು, ನಾಲ್ವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಜಾಮೀನು ನೀಡಿದರೆ ದೇಶ ಬಿಟ್ಟು ಹೋಗಬಹುದು. ಅಂಥ ಸಾಕಷ್ಟು ಪ್ರಕರಣಗಳು ಈಗಾಗಲೇ ನಡೆದಿವೆ. ಸಚಿವರೂ ಸೇರಿ ಆರೋಪಿಗಳು ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸಿದ್ದಾರೆ. ವಿಚಾರಣೆ ವೇಳೆ ಹಣದ ಮೂಲದ ಬಗ್ಗೆ ಆರೋಪಿಗಳು ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ತೆರಿಗೆ ನೀಡದ ಹಣ ಸಂರಕ್ಷಿಸಿಡಲು ದೆಹಲಿಯ ಫ್ಲ್ಯಾಟ್ ಬಳಸಿಕೊಂಡಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಶಿವಕುಮಾರ್ ಪರ ವಕೀಲ ಶೇಷಾಚಲ ಪ್ರತಿವಾದ ಮಂಡಿಸಿ, ಈ ಹಿಂದೆ ಇಂಥ ಮೂರು ಪ್ರಕರಣಗಳಲ್ಲಿ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಸನ್ನಿವೇಶದಲ್ಲಿ ಭಿನ್ನತೆ ಇಲ್ಲ. ಐಟಿ ಅಧಿಕಾರಿಗಳು ಜಪ್ತಿ ಮಾಡಿದ ಹಣಕ್ಕೆ ಸೂಕ್ತ ಲೆಕ್ಕ ಕೊಡಲು ಆರೋಪಿಗಳು ಸಮರ್ಥರಿದ್ದಾರೆ. 2018-19ರ ಆರ್ಥಿಕ ವರ್ಷದ ಲೆಕ್ಕಾಚಾರ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಇನ್ನೂ ಆಡಿಟಿಂಗ್ ಮಾಡಿಲ್ಲ. ಹೀಗಾಗಿ ಇದರಲ್ಲಿ ಅಪರಾಧದ ಯಾವುದೇ ಅಂಶಗಳು ಕಂಡು ಬಂದಿಲ್ಲ. ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ಇದು ಗಂಭೀರ ಪ್ರಕರಣವಲ್ಲ. ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ಕೋರಿದರು.

ಏನಿದು ಪ್ರಕರಣ?

ಆದಾಯ ತೆರಿಗೆ ಅಧಿಕಾರಿಗಳು ಕೆಲ ತಿಂಗಳ ಹಿಂದೆ ದೆಹಲಿಯ ಅಪಾರ್ಟ್​ವೆುಂಟ್​ವೊಂದರ ಫ್ಲ್ಯಾಟ್​ನಲ್ಲಿ ಡಿ.ಕೆ. ಶಿವಕುಮಾರ್​ಗೆ ಸೇರಿದ್ದೆನ್ನಲಾದ 8.59 ಕೋಟಿ ರೂ. ಪತ್ತೆ ಹಚ್ಚಿ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಶಿವಕುಮಾರ್​ಗೆ ಐಟಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದರು. ಆ ವೇಳೆ ಜಪ್ತಿ ಮಾಡಿದ ಹಣದ ಮೂಲದ ಬಗ್ಗೆ ಸಚಿವರು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬಂಧನ ಭೀತಿಯಿಂದ ಸಚಿವರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಾಲ್ವರಿಗೂ ಮಧ್ಯಂತರ ಜಾಮೀನು ನೀಡಿ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿತ್ತು. ಆದರೆ, ಸೆ.15ರಂದೇ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಸಚಿವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರಿಂದ ನ್ಯಾಯಾಲಯ ಶನಿವಾರವೇ ವಿಚಾರಣೆ ನಡೆಸಿದೆ.

ತಡವಾಗಿ ಶುರುವಾದ ವಿಚಾರಣೆ

ಸಚಿವರು ಬೆಳಗ್ಗೆ 11ಕ್ಕೆ ನ್ಯಾಯಾಲಯಕ್ಕೆ ಬಂದಿದ್ದರು. ಆದರೆ, ಐಟಿ ಅಧಿಕಾರಿಗಳ ಪರ ವಕೀಲರು ನ್ಯಾಯಾಲಯಕ್ಕೆ ಬರುವುದು ತಡವಾದ್ದರಿಂದ 11.50ರ ನಂತರ ವಿಚಾರಣೆ ಆರಂಭವಾಯಿತು. ನ್ಯಾಯಾಧೀಶರು ಮಧ್ಯಾಹ್ನ 3 ಗಂಟೆಗೆ ಆದೇಶ ಕಾಯ್ದಿರಿಸಿದ್ದರು. ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೂರು ನೀಡಿದ ಸಂದರ್ಭದಲ್ಲಿ ಸಚಿವರು ಹವಾಲಾ ವ್ಯವಹಾರದಲ್ಲಿ ಭಾಗಿಯಾದ ಬಗ್ಗೆಯೂ ವಿವರ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.