ಪ್ರೀತಿಸಿ ಮದುವೆಯಾಗಿದ್ದ ನವದಂಪತಿ ಆತ್ಮಹತ್ಯೆಗೆ ಶರಣು

ಮಂಡ್ಯ: ಡೆತ್ ನೋಟ್ ಬರೆದಿಟ್ಟು ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಶ್ವಿನಿ(21), ನವೀನ್(25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.

ಇಬ್ಬರೂ ಮಂಡ್ಯದ ಹೆಬ್ಬಕವಾಡಿ ಗ್ರಾಮದವರಾಗಿದ್ದು, 20 ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಮೂರು ದಿನಗಳ ಹಿಂದಷ್ಟೇ ಹೆಬ್ಬಕವಾಡಿ ಗ್ರಾಮದಿಂದ ಅಂಚೆದೊಡ್ಡಿ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಬಂದಿದ್ದರು. ಆದರೆ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ನಮ್ಮ ಸಾವಿಗೆ ಯಾರೂ ಕಾರಣರಲ್ಲ. ನಮ್ಮ ಆಸೆಯಂತೆ ಮದುವೆ ಮಾಡಿಕೊಂಡು ಅದನ್ನು ಉಳಿಸಿಕೊಳ್ಳಲಾಗದೆ ಜೀವನದಲ್ಲಿ ಜುಗುಪ್ಸೆಗೊಂಡು ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ.

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್‌)