72 ಗಂಟೆ ಬಳಿಕ ನಾಲ್ವರು ಪವಾಡಸದೃಶ ಪಾರು!

ಧಾರವಾಡ: ಇಲ್ಲಿನ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ 72 ಗಂಟೆಗಳ ಕಾಲ ನೀರು, ಆಹಾರ, ಬೆಳಕು ಇಲ್ಲದೆ ಗುಟುಕು ಜೀವ ಹಿಡಿದುಕೊಂಡಿದ್ದ ನಾಲ್ವರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ವಿಶೇಷವೆಂದರೆ ಅವಶೇಷಗಳಲ್ಲಿ ಸಿಲುಕಿದ್ದವರೂ ಕಾರ್ಯಾಚರಣೆಗೆ ಕೈಜೋಡಿಸಿದ್ದರು.

ಶುಕ್ರವಾರ ಒಂದು ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 14ಕ್ಕೆ ಏರಿದೆ. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ 5 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿತ್ತು. ಹಲವರು ಕಾಣೆಯಾಗಿರುವ ಪಟ್ಟಿ ಹಿಡಿದು ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ಪಡೆ, ಶುಕ್ರವಾರ ಬೆಳಗ್ಗೆಯೂ ಕಾರ್ಯಾಚರಣೆ ಮುಂದುವರಿಸಿತು.

ಜೆಡಿಎಸ್​ನ ಮಾಜಿ ಕಾಪೋರೇಟರ್ ಕಚೇರಿಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಗನಗೌಡ ಪರಮೇಶ್ವರ ರಾಮನಗೌಡರ (24) ಎಂಬುವರನ್ನು ಮೊದಲು ರಕ್ಷಿಸಲಾಯಿತು. ಸಣ್ಣ ಕಿಂಡಿ ಇದ್ದಿದ್ದರಿಂದ ಇವರಿಗೆ ಉಸಿರಾಡಲು ಅಷ್ಟಾಗಿ ಸಮಸ್ಯೆಯಾಗಿಲ್ಲ. ಜೆಸಿಬಿ ಸದ್ದಿನಿಂದ ರಕ್ಷಿಸುತ್ತಾರೆಂಬ ನಂಬಿಕೆ ಹುಟ್ಟಿ ಜೀವ ಉಳಿಸಿಕೊಳ್ಳಲೇಬೇಕೆಂಬ ಗಟ್ಟಿ ಸಂಕಲ್ಪದಿಂದ ಇದ್ದಿದ್ದೇ ನೆರವಿಗೆ ಬಂದಿದೆ. ಸಮೀಪದಲ್ಲಿ ಅವಶೇಷ ತೆಗೆದಾಗ ಕಾಪಾಡಿ ಎಂಬ ಚೀರಾಟ ಕೇಳಿದ್ದರಿಂದ ಕಾರ್ಯಾಚರಣೆಗಿಳಿದ ಎಸ್​ಡಿಆರ್​ಎಫ್ ಪಡೆಗೆ ಅಡ್ಡ ಬಂದ ಗೋಡೆ ತೆಗೆಯುವುದು ಅಸಾಧ್ಯವಾಗಿತ್ತು. ಕೊನೆಗೆ ಸಂಗನಗೌಡರಿಗೆ ನೀರು, ಆಕ್ಸಿಜನ್ ವ್ಯವಸ್ಥೆ ಮಾಡಿ ಅವರಿಗೇ ಹಾರೆ ಕೊಟ್ಟು ಗೋಡೆ ಒಡೆಸಿ ಹೊರತೆಗೆಯಲಾಗಿದೆ. 3 ದಿನ ನೀರು, ಆಹಾರವಿಲ್ಲದೇ ನಿತ್ರಾಣಗೊಂಡರೂ ನಡೆದೇ ಆಂಬುಲೆನ್ಸ್ ಏರಿದ್ದಾರೆ.

ಮಾಜಿ ಸೈನಿಕನ ದೇಹ ಹೊರಕ್ಕೆ

ದುರಂತ ಕಟ್ಟಡದಲ್ಲಿ ಗುರುವಾರ ಸಂಜೆವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಬನಶ್ರೀನಗರದ ನಿವಾಸಿಯಾಗಿರುವ ಮಾಜಿ ಸೈನಿಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಸುಬ್ಬಪ್ಪ ಪದ್ಮಪ್ಪ ದಿಂಡಲಕೊಪ್ಪ (63) ಎಂಬುವರ ಮೃತದೇಹ ಹೊರತೆಗೆಯಲಾಯಿತು. ಇವರು ಕಟ್ಟಡದಲ್ಲಿ ಮಳಿಗೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು.

ಮೊದಲು ಪತ್ನಿಯನ್ನು ರಕ್ಷಿಸಿ

ಕಾರ್ಯಾಚರಣೆ ಮುಂದುವರಿಸಿದ ಪಡೆಗೆ ಕಟ್ಟಡ ಕಾರ್ವಿುಕರಾದ ದಿಲೀಪ್ (ದಾಕ್ಲು) ಹಾಗೂ ಸಂಗೀತಾ ಕೋಕರೆ ದಂಪತಿಯ ಕೂಗಾಟ ಕೇಳಿತು. ಇವರ ರಕ್ಷಣೆಗೆ ದೊಡ್ಡ ಪಿಲ್ಲರ್ ಅಡ್ಡಬಂದಿತ್ತು. ಸಂಗೀತಾಳ ಕಾಲ ಮೇಲೆ ಅವಶೇಷ ಬಿದ್ದು ಗಾಯಗೊಂಡಿದ್ದರು. ರಕ್ಷಿಸಲು ಮುಂದಾದಾಗ ‘ಮೊದಲು ನನ್ನ ಪತ್ನಿಯನ್ನು ಹೊರತೆಗೆಯುವವರೆಗೆ ನಾನು ಹೊರಬರುವುದಿಲ್ಲ’ ಎಂದು ದಿಲೀಪ್ ಗೋಗರೆದಿದ್ದಾರೆ. ಕೊನೆಗೆ ಪಿಲ್ಲರ್ ಕತ್ತರಿಸಲು ಅವರ ಕೈಗೆ ಹಾರೆ, ಇತರ ಸಾಮಗ್ರಿ ಕೊಟ್ಟಿದ್ದರಿಂದ ರಕ್ಷಣಾ ಪಡೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ ಮೊದಲು ಪತ್ನಿಯನ್ನು ರಕ್ಷಿಸಿ ಹೊರಕಳುಹಿಸಿ, ಬಳಿಕ ಅವರೂ ಹೊರಬಂದರು. ಜೀವ ಉಳಿಸಿದ್ದಕ್ಕೆ ಎರಡೂ ಕೈ ಎತ್ತಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು.

ಹೊರಬಂದ ಹೊನ್ನಮ್ಮ

ಈ ದಂಪತಿಯಿಂದ ಮಾಹಿತಿ ಪಡೆದ ರಕ್ಷಣಾ ಪಡೆ ಬಳ್ಳಾರಿ ಮೂಲದ ಕಟ್ಟಡ ಕಾರ್ವಿುಕ ಮಹಿಳೆ ಹೊನ್ನಮ್ಮ ಮಾರುತಿ ಕಮಸೋಳೆ (45) ಎಂಬುವರನ್ನು 3 ಗಂಟೆ ಕಾಲ ಸುರಂಗ ಕೊರೆದು ಕಾಪಾಡಿದೆ.

ದೇವರೇ.., ಮಕ್ಕಳೊಂದಿಗೆ ಸೇರಿಸು

‘ನಾನು. ನನ್ನ ಪತ್ನಿ ಇಬ್ಬರೂ ನೆಲ ಮಹಡಿಯಲ್ಲಿ ಗಾರೆ ಕೆಲಸ ಮಾಡುತಿದ್ದಾಗ ಕಟ್ಟಡ ಕುಸಿದು ಸಿಲುಕಿದೆವು. ಸಣ್ಣ ಕಿಂಡಿಯಷ್ಟು ಜಾಗ ಇತ್ತು. ಸ್ವಲ್ಪ ದೂರದಲ್ಲಿದ್ದ ಪತ್ನಿಯ ಕೈ ಹಿಡಿದುಕೊಂಡೆ. ಆಗ ನನಗೆ ಸಾವನ್ನು ಎದುರಿಸಲು ಮತ್ತಷ್ಟು ಧೈರ್ಯ ಬಂತು. ಅಷ್ಟರಲ್ಲಿ ಸಂಗನಗೌಡನ ಧ್ವನಿ ಕೇಳಿತು. ಈ ವೇಳೆ ಪತ್ನಿ ತೀವ್ರ ಬಾಯಾರಿದ್ದರಿಂದ ಅಲ್ಲೇ ಇದ್ದ ಸಿಮೆಂಟ್ ಮಿಶ್ರಿತ ನೀರನ್ನು ಬೇಡವೆಂದರೂ ಕುಡಿಸಿದೆ. ಪ್ರತಿಕ್ಷಣವೂ ಜೀವಭಯದಲ್ಲೇ ಇದ್ದೆವು ಎಂದು ಕಣ್ಣೀರಾದರು ದಿಲೀಪ. ‘ನಾವು ಸತ್ತರೆ ಮನೆಯಲ್ಲಿರುವ ನಾಲ್ಕು ಮಕ್ಕಳಿಗೆ ಯಾರು ದಿಕ್ಕು. ದೇವರೇ ಕಾಪಾಡು ಎಂಬ ಮೊರೆ ಕೇಳಿಸಿಕೊಂಡಿದ್ದರಿಂದಲೇ ನಾವು ಮಕ್ಕಳನ್ನು ಸೇರಲು ಸಾಧ್ಯವಾಯಿತು ಎನ್ನುತ್ತಾರೆ ಸಂಗೀತಾ.