ಬೆಳಗಾವಿ: ಜೋಡಿ ಕೊಲೆ ಆರೋಪಿ ಅರೆಸ್ಟ್

ಬೆಳಗಾವಿ: ಇತ್ತೀಚೆಗೆ ಚನ್ನಮ್ಮ ಕಿತ್ತೂರು ಸಮೀಪದ ಶಿವ ಪೆಟ್ರೋಲ್ ಪಂಪ್‌ನಲ್ಲಿ ಇಬ್ಬರನ್ನು ಕೊಲೆಗೈದು ಲಕ್ಷ ರೂ.ದೋಚಿದ ಪ್ರಕರಣ ಭೇದಿಸಿರುವ ಬೆಳಗಾವಿ ಜಿಲ್ಲಾ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಭೀಮಪ್ಪ ಕಲ್ಲಪ್ಪ ತೀರ್ಥಪ್ಪನವರ(24) ಬಂಧಿತ. ಆರೋಪಿಯು ಮೇ 15 ರಂದು ಬೆಳಗಿನ ಜಾವ ಪೆಟ್ರೋಲ್ ಪಂಪನಲ್ಲಿ ಮಲಗಿದ್ದ ಲಿಂಗದಳ್ಳಿಯ ಮಂಜುನಾಥ ಈರಪ್ಪ ಪಠಾಣ(23) ಹಾಗೂ ತಿಗಡೊಳ್ಳಿಯ ಮುಸ್ತಾಪ್ ಎಂ. ಬೀಡಿ(35) ಎಂಬುವವರನ್ನು ಕೊಡಲಿಯಿಂದ ಕೊಲೆಗೈದು ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಅಶೋಕ ಸಿದ್ದಪ್ಪ ಗಾಣಿಗೇರ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುಷ್ಕರ್ಮಿಯ ಪತ್ತೆಗಾಗಿ ತಂಡ ರಚಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಪಂಪ್‌ನಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಯುವಕ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಯುವಕನನ್ನು ಹೋಲುವ 30ಕ್ಕೂ ಅಧಿಕ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದರು. ಶನಿವಾರ ಬೆಳಗ್ಗೆ ಆರೋಪಿ ಭೀಮಪ್ಪನನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕೊಡಲಿ ಹಾಗೂ ಹಣ ದೋಚಿದ್ದ ಬ್ಯಾಗ್ ವಶಪಡಿಸಿಕೊಂಡಿದ್ದಾರೆ.

ಸಾಲ ತೀರಿಸಲು ಕಳ್ಳತನ

ದರೋಡೆಗೆ ಹಣದಾಸೆಯೇ ಕಾರಣ ಎಂದು ತಿಳಿದು ಬಂದಿದ್ದು, ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಮಾಡಿದ್ದ ಲಕ್ಷಾಂತರ ರೂ.ಗಳ ಸಾಲ ತೀರಿಸಲು ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ. ಧಾರವಾಡ ತಾಲೂಕಿನ ಬೇಲೂರಿನ ಆರ್‌ಎಸ್‌ಬಿ ಕಾರ್ಖಾನೆಯಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಭೀಮಪ್ಪ ಹಲವು ವ್ಯಕ್ತಿಗಳಿಂದ ಸಾಲ ಪಡೆದಿದ್ದ.

ಸಾಲ ಹಿಂದಿರುಗಿಸುವಂತೆ ಪದೇ ಪದೆ ಕೇಳುತ್ತಿದ್ದರಿಂದ ಕಳ್ಳತನ ಮಾಡಿ ಸಾಲ ತೀರಿಸಲು ಮುಂದಾಗಿದ್ದ. ಮೇ 15 ರಂದು ರಾತ್ರಿ 1.30ರ ಸುಮಾರಿಗೆ ಕೃತ್ಯ ಎಸಗಲು ಪ್ರಯತ್ನಿಸಿದ್ದ. ಆದರೆ, ಆತನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದ್ದರಿಂದ ಅಲ್ಲಿಂದ ಕಾಲ್ಕಿತ್ತು ಮತ್ತೆ ಬೆಳಗಿನ ಜಾವ 3.20 ರ ಸುಮಾರಿಗೆ ಕೊಡಲಿಯಿಂದ ಇಬ್ಬರನ್ನು ಕೊಲೆಗೈದು ಹಣ ದೋಚಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ತಿಳಿಸಿದ್ದಾರೆ.

*25ರವಿಜಿ4-ಎ
ಇಬ್ಬರನ್ನು ಕೊಲೆಗೈದು ಹಣ ದೋಚಿದ ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.

*25ರವಿಜಿ4-ಬಿ
ಭೀಮಪ್ಪ ಕಲ್ಲಪ್ಪ ತೀರ್ಥಪ್ಪನವರ

Leave a Reply

Your email address will not be published. Required fields are marked *