ಮಂಡ್ಯ: ಒಂದು ವರ್ಷದ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆಯೊಂದು ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಈ ದುರಂತ ಪ್ರಕರಣ ನಡೆದಿದೆ.
ರಘು (28), ತನುಶ್ರೀ (24) ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಂಡ್ಯ ನಗರದ ರಘು, ಗಂಗವಾಡಿಯ ತನುಶ್ರೀ ಪ್ರೀತಿಸಿ ಮದುವೆಯಾಗಿದ್ದರು. ಎಂಟು ದಿನಗಳ ಹಿಂದೆ ಮಗು ಹಾಗೂ ಪತಿ ಜತೆ ತನುಶ್ರೀ ತಂದೆಯ ಮನೆಗೆ ಬಂದಿದ್ದು, ಇಂದು ಮಗುವನ್ನು ಕೊಂದು ಇಬ್ಬರೂ ನೇಣಿಗೆ ಶರಣಾಗಿದ್ದಾರೆ.
ಇವರು ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದರೂ, ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೆ ಆತ್ಮಹತ್ಯೆಗೂ ಮುನ್ನ ತನುಶ್ರೀ ಡೆತ್ನೋಟ್ ಬರೆದಿಟ್ಟಿದ್ದರು. ನಮ್ಮ ಸಾವಿಗೆ ಯಾರೂ ಕಾರಣವಲ್ಲ, ನಾವೇ ಕಾರಣ.. ದಯವಿಟ್ಟು ನಮ್ಮನ್ನು ಕ್ಷಮಿಸಿ. ನನ್ನ ಗಂಡನ ಮೊಬೈಲ್ಫೋನ್ನಲ್ಲಿ ಇರುವ ನಂಬರ್ಗಳಿಗೆ ಕರೆ ಮಾಡಿ ತಿಳಿಸಿ ಎಂದೂ ಬರೆದಿದ್ದರು.
ನನ್ನ ಮಗಳಿಗೆ ನಾನು ತಂದಿರುವ ಹೊಸ ಬಟ್ಟೆಯನ್ನೇ ಹಾಕಿ. ನನ್ನ ಕೊನೆಯಾಸೆಯಂತೆ ಮೂರು ಜನರನ್ನೂ ಒಟ್ಟಿಗೇ ಮಣ್ಣು ಮಾಡಿ. ನಮ್ಮನ್ನು ಖುಷಿಯಿಂದ ಕಳುಹಿಸಿಕೊಡಿ. ಯಾರೂ ಜಗಳವಾಡಬೇಡಿ ಎಂಬುದಾಗಿಯೂ ಡೆತ್ನೋಟ್ನಲ್ಲಿ ಬರೆದಿಡಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ