ಸಿರೋಹಿ: ಅಫ್ಘಾನಿಸ್ತಾನದ ಪಾಸ್ಪೋರ್ಟ್ ಬಳಸಿಕೊಂಡು ಪಾಕಿಸ್ತಾನ ಬೇಹುಗಾರಿಕಾ ಪಡೆಯ ಏಜೆಂಟ್ ಸಹಿತ ನಾಲ್ವರು ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎನ್ನಲಾಗಿದೆ. ಇವರೆಲ್ಲರೂ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜಸ್ಥಾನ-ಗುಜರಾತ್ ಗಡಿ ಭಾಗ ಸೇರಿ ದೇಶದಾದ್ಯಂತ ಕಟ್ಟೆಚ್ಚರ ಘೋಷಿಸಿದೆ.
ಈ ವಿಷಯವನ್ನು ಸಿರೋಹಿ ಎಸ್ಪಿ ಕಲ್ಯಾಣ್ಮಲ್ ಮೀನಾ ಖಚಿತಪಡಿಸಿದ್ದಾರೆ. ದೇಶದೊಳಗೆ ನುಸುಳಿರುವ ಈ ತಂಡ ಯಾವುದೇ ಕ್ಷಣದಲ್ಲಿ, ದೇಶದ ಯಾವುದೇ ಭಾಗದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳು ವಿಶೇಷವಾಗಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಬಿಗಿ ಪಹರೆ ಏರ್ಪಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬರುತ್ತಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕು. ತನ್ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರ ತನ್ನ ಸೂಚನೆಯಲ್ಲಿ ತಿಳಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)