ನಮಗೆ ದೇಶವೇ ಮೊದಲು ಹೊರತು ಪಕ್ಷವಲ್ಲ: ಪ್ರಧಾನಿ ನರೇಂದ್ರ ಮೋದಿ

ರಾಯ್ ​ಬರೇಲಿ: ಭಾರತೀಯ ಸೇನೆಯ ಕಡೆಗಿನ ಕಾಂಗ್ರೆಸ್​ ಮನೋಭಾವವನ್ನು ದೇಶದ ಜನರು ಎಂದು ಮರೆಯುವುದಿಲ್ಲ ಹಾಗೆಯೇ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶವೇ ಮೊದಲು ಹೊರತು ಪಕ್ಷವಲ್ಲ
ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿರುವ ಅತ್ಯಾಧುನಿಕ ರೈಲ್ವೆ ಕೋಚ್​ ಕಾರ್ಖಾನೆ ಪರಿಶೀಲನೆ ನಂತರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ನಮಗೆ ದೇಶವೇ ಮೊದಲು ಹೊರತು ಪಕ್ಷವಲ್ಲ. ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡುವ ಯೋಧರು ಯಾವುದೇ ಕಷ್ಟಗಳನ್ನು ಎದುರಿಸದಿರುವಂತೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ದೇಶದ ಮುಂದೆ ಎರಡು ರೀತಿಯ ವರ್ಗಗಳಿವೆ
ಇಂದು ದೇಶದ ಮುಂದೆ ಎರಡು ರೀತಿಯ ವರ್ಗಗಳಿವೆ. ಒಂದು ವರ್ಗವಾದ ಸರ್ಕಾರ ನಮ್ಮ ಸೇನೆಯನ್ನು ಸಶಕ್ತಗೊಳಿಸುವ ಪ್ರಯತ್ನ ಮಾಡುತ್ತಿದೆ. ಇನ್ನೊಂದು ವರ್ಗ ಯಾವುದೇ ಪರಿಸ್ಥಿತಿಯಲ್ಲಿ ಅದನ್ನು ನಿಶಕ್ತಗೊಳಿಸಬೇಕೆಂದು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನಮ್ಮ ಪಡೆಗಳನ್ನು ಬಲಪಡಿಸಬಾರದೆಂಬ ಬಲವಾದ ನಿಲುವನ್ನು ಹೊಂದಿದೆ. ಇದಕ್ಕೆ ದೇಶವೇ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಶತ್ರುಗಳ ಬೆಲೆಯನ್ನು ಹೆಚ್ಚು ನಂಬುತ್ತಾರೆ
ಆ ಪಕ್ಷದ ಮಂದಿ ಸರ್ಜಿಕಲ್​ ದಾಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮ ಸೇನೆಗಿಂತ ಶತ್ರುಗಳ ಬೆಲೆಯನ್ನು ಹೆಚ್ಚು ನಂಬುತ್ತಾರೆ. ಅಂಥವರಿಂದ ನಾವು ಏನನ್ನು ನೀರಿಕ್ಷಿಸಬಹುದು? ಎಂದು ಪರೋಕ್ಷವಾಗಿ ಕಾಂಗ್ರೆಸ್​ ಪಕ್ಷವನ್ನು ಕುಟುಕಿದರು.

ವಿದೇಶಿಗರು ತೊಡಗಿದ್ದಾರೆ
ಯುಪಿಎ ಅವಧಿಯ ಪ್ರತಿಯೊಂದು ರಕ್ಷಣಾತ್ಮಕ ಒಪ್ಪಂದದಲ್ಲೂ ಇತರೆ ಕೆಲವು ವಿದೇಶಿಗರು ತೊಡಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಗಸ್ತಾವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿಯನ್ನು ದೇಶಕ್ಕೆ ಕರೆತಂದಿದ್ದೇವೆ. ಆತನನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್​ ತಮ್ಮ ವಕೀಲರನ್ನು ನೇಮಿಸಿದ್ದನ್ನು ನೀವೆಲ್ಲ ನೋಡಿದ್ದೀರ ಎಂದು ಪ್ರಧಾನಿ ತಿಳಿಸಿದರು.

ಭರವಸೆಯನ್ನು ಇನ್ನೂ ಈಡೇರಿಸಿಲ್ಲ
ಕರ್ನಾಟಕ ರೈತರಿಗೆ ಕಾಂಗ್ರೆಸ್​ ನೀಡಿದ್ದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ. ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ವರದಿಗಳ ಪ್ರಕಾರ ಆರು ತಿಂಗಳಲ್ಲಿ ಕೇವಲ 1,000 ರೈತರು ಮಾತ್ರ ಇದರ ಲಾಭ ಪಡೆದಿದ್ದಾರಷ್ಟೇ ಎಂದು ವ್ಯಂಗ್ಯವಾಡಿದರು.

ಹೆಚ್ಚು ಉದ್ಯೋಗ ಸಿಗಲಿದೆ
ಅತ್ಯಾಧುನಿಕ ರೈಲ್ವೆ ಕೋಚ್​ ಕಾರ್ಖಾನೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದರಿಂದ ಯುವ ಇಂಜಿನಿಯರ್​ ಹಾಗೂ ತಂತ್ರಜ್ಞರಿಗೆ ಹೆಚ್ಚು ಉದ್ಯೋಗ ಸಿಗಲಿದೆ. ಆದರೆ, ಕಾರ್ಖಾನೆ ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಲು ಹಿಂದಿನ ಸರ್ಕಾರ ಬಿಟ್ಟಿರಲಿಲ್ಲ ಎಂದು ಮೋದಿ ಕಿಡಿಕಾರಿದರು. ಅಲ್ಲದೆ, ರಾಯ್​ ಬರೇಲಿ ರೈಲ್ವೆ ಕೋಚ್ ಉತ್ಪಾದನಾ ಕಾರ್ಖಾನೆ ಮುಂದಿನ ದಿನಗಳಲ್ಲಿ ವಿಶ್ವದ ದೊಡ್ಡ​ ಉತ್ಪಾದನಾ ಕಾರ್ಖಾನೆಯಾಗಲಿದೆ ಎಂದು ಭವಿಷ್ಯ ನುಡಿದರು.

ಸೋನಿಯಾ ಗಾಂಧಿ ಕ್ಷೇತ್ರದಲ್ಲಿ ಮೋದಿ ಕಹಳೆ
ಮೋದಿ ಭಾಷಣಕ್ಕೂ ಮುನ್ನ ಹಮ್ಸಾಫರ್ ರೇಕ್ ಅತ್ಯಾಧುನಿಕ ರೈಲ್ವೆ ಕೋಚ್​ ಕಾರ್ಖಾನೆಯ 900ನೇ ರೈಲ್ವೆ ಕೋಚ್​ಗೆ ಚಾಲನೆ ನೀಡಿದರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಧಾನಿಗೆ ಸಾಥ್​ ನೀಡಿದರು. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅವರು ರಾಯ್​ ಬರೇಲಿಗೆ ಭೇಟಿ ನೀಡಿದ್ದಾರೆ. ರಾಯ್​ ಬರೇಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಕ್ಷೇತ್ರವಾಗಿದೆ.​ (ಏಜೆನ್ಸೀಸ್​)

Leave a Reply

Your email address will not be published. Required fields are marked *