ಚಿಕ್ಕಮಗಳೂರು: ಯಾರು ಬೇಕಾದರೂ ಬಂದು ಇಲ್ಲಿರಲು ಭಾರತ ಧರ್ಮ ಛತ್ರವಲ್ಲ, ಬಾಂಗ್ಲಾ ದೇಶದಿಂದ ಮೂರು ಲಕ್ಷಕ್ಕೂ ಅಧಿಕ ನುಸುಳುಕೋರರು ಇಲ್ಲಿ ಭಯೋತ್ಪಾದನೆಯಂತಹ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಎಸ್ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ಪೌರತ್ವ ಕಾಯ್ದೆ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,
ಅಮೆರಿಕಾ, ಯೂರೋಪ್ ದೇಶಗಳಲ್ಲಿ ವೀಸಾ ಅವಧಿ ಮುಗಿದು ಒಂದು ದಿನ ಹೆಚ್ಚಾದರೂ ಜೈಲಿಗೆ ಹಾಕುತ್ತಾರೆ. ಆದರೆ ಭಾರತದಲ್ಲಿ ಯಾರೂ ಬೇಕಾದರೂ ಒಳಗೆ ಬಂದು ವಾಸ ಮಾಡಬಹುದು ಎಂಬು ಭಾವನೆ ಇದೆ. ಇದಕ್ಕೆ ಕಡಿವಾಣ ಹಾಕುವ ನಿಯಮ ಮುಂದೆ ಬರಲಿದೆ. ನಮ್ಮ ದೇಶದಲ್ಲಿ ಯಾರು ವಾಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಬೇಕಿದೆ ಎಂದರು.
ಬಾಂಗ್ಲಾ ದೇಶದಿಂದ ಬಂದಿರುವ ನುಸಳುಕೋರರು ವಿಳಾಸ ಕೇಳಿದರೆ ಓಡಿ ಹೋಗುತ್ತಾರೆ. ಇವರು ಯಾವ ಚಟುವಟಿಕೆ ಮಾಡುತ್ತಿದ್ದಾರೆಂಬ ಮಾಹಿತಿ ಇರುವುದಿಲ್ಲ. ಇಲ್ಲಿ ಯಾರೂ ಕೇಳಲ್ಲ ಎನ್ನುವ ಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಕಾಯ್ದೆಯನ್ನು ವಿರೋಧ ಮಾಡುವವರಿಗೆ ಕಾಯ್ದೆ ಬಗ್ಗೆ ಕೇಳಿದರೆ ಮಾಹಿತಿ ಇರುವುದಿಲ್ಲ. ಅಜ್ಞಾನದಿಂದ ಕೆಲವರು ಪ್ರತಿಭಟನೆಗಿಳಿದಿದ್ದಾರೆ. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ದೇಶದ ವಿಚಾರ ಮುಖ್ಯವಾಗಬೇಕು. ಇಲ್ಲಿ 12 ವರ್ಷ ವಾಸವಾಗಿದ್ದವರಿಗೆ ಸಹಜವಾಗಿ ಪೌರತ್ವ ದೊರೆಯುತ್ತದೆ. ಆ ನಿಯಮಕ್ಕೆ ಯಾವುದೇ ಬದಲಾವಣೆ ತಂದಿಲ್ಲ. ಇದಕ್ಕೆ ಸೋನಿಯಾ ಗಾಂಧಿ ಉದಾಹರಣೆಯಾಗಿದ್ದಾರೆ. ಪೌರತ್ವ ಕಾಯ್ದೆ ಜಾರಿಗೆ ಹಿಂದಿನ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಒತ್ತಾಯ ಮಾಡಿದ್ದವು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಮುಖಂಡ ಎಚ್.ಡಿ.ತಮ್ಮಯ್ಯ, ಪ್ರಭಾರ ಪ್ರಾಚಾರ್ಯ ಶಿವಬಸವಯ್ಯ, ಉಪನ್ಯಾಸಕ ವಿಜಯಕುಮಾರ್ ಇದ್ದರು.