ಯಾರ ಪರವಾಗಿದೆ ಕಾಂಗ್ರೆಸ್ ಪ್ರಣಾಳಿಕೆ?

ಚಿಕ್ಕಮಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ವಿದ್ರೋಹ ಕಾಯ್ದೆ (124ಎ) ಹಿಂತೆಗೆದುಕೊಳ್ಳುವ, ಜಮ್ಮು-ಕಾಶ್ಮೀರದಲ್ಲಿ ಸೈನ್ಯ ಕಡಿತ ಮಾಡುವ ಭರವಸೆ ನೀಡಿದೆ. ಕಾಂಗ್ರೆಸ್ ಯಾರ ಪರವಾಗಿ ಪ್ರಣಾಳಿಕೆ ರೂಪಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಣಾಳಿಕೆ ಭಾರತೀಯರ ಪರವಾಗೋ? ಪಾಕಿಸ್ತಾನ ಅಥವಾ ದೇಶ ವಿದ್ರೋಹಿಗಳ ಪರವಾಗೋ? ಎನ್ನುವುದು ಆಘಾತಕಾರಿ ಅಂಶ. ಚುನಾವಣಾ ಸಮಯದಲ್ಲಿ ಯಾವುದೆ ಪಕ್ಷದ ನೀತಿ, ಅದು ಬಿಡುಗಡೆ ಮಾಡುವ ಪ್ರಣಾಳಿಕೆ ದೇಶವನ್ನು ಅಸ್ಥಿರಗೊಳಿಸುವಂತೆ ಇರಬಾರದು ಎಂದರು.

ಅಧಿಕಾರ ಬಂದು ಹೋಗಬಹುದು. ಆದರೆ ದೇಶದ ಭದ್ರತೆಗೆ ಧಕ್ಕೆ ತರುವ ಪ್ರಣಾಳಿಕೆ ರೂಪಿಸಬಾರದು. ಆರ್ಥಿಕ ನೀತಿ ವ್ಯತ್ಯಾಸವಾದರೆ ಹೆಚ್ಚು ಹಾನಿಯಾಗದು. ಅದೇ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯಲ್ಲಿ ರಾಜೀ ಆಗಬಾರದು. ಆದರೆ ಕಾಂಗ್ರೆಸ್ ಈ ಎರಡರಲ್ಲೂ ರಾಜಿಯಾಗಿದೆ ಎಂದು ಆರೋಪಿಸಿದರು.

ಜೈಲಿನಲ್ಲಿರುವ ಉಗ್ರರನ್ನು ಬಿಡುಗಡೆ ಮಾಡುತ್ತೇವೆ, ಸಾವನ್ನಪ್ಪಿರುವ ಭಯೋತ್ಪಾದಕರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಕಾಂಗ್ರೆಸ್​ನ ರಾಷ್ಟ್ರೀಯ ಉಪಾಧ್ಯಕ್ಷರೊಬ್ಬರು ಬಹಿರಂಗವಾಗಿ ಹೇಳಿದ್ದಾರೆ. ಜತೆಗೆ ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವುದಾಗಿಯೂ ಹೇಳಿದ್ದಾರೆ. ಬಿಜೆಪಿಗೆ ಜೈಲಿನ ಭಯವಿಲ್ಲ. ಆದರೆ ಭಯೋತ್ಪಾದಕರಿಗೆ ಪರಿಹಾರ ನೀಡುವುದು, ಅವರನ್ನು ಬಿಡುಗಡೆ ಮಾಡುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಈ ಮೂಲಕ ಕಾಂಗ್ರೆಸ್ ದೇಶಕ್ಕೆ ಏನು ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧಿ, ಗೋಖಲೆ ಮತ್ತಿತರರು ಕಟ್ಟಿ ಬೆಳೆಸಿದ ಪಕ್ಷವೇ ಇದು ಎಂಬ ಅನುಮಾನ ಮೂಡುತ್ತಿದೆ. ನೆಹರು, ಇಂದಿರಾ ಗಾಂಧಿ ಕಾಲದಲ್ಲಿ ಅಧಿಕಾರ ತಮ್ಮ ಕೈಯಲ್ಲೇ ಉಳಿಯಲಿ ಎಂದು ಕೆಲವು ಅತಿರೇಕದ ಕ್ರಮ ಕೈಗೊಂಡಿರಬಹುದು. ಆದರೆ ದೇಶದ್ರೋಹದ ಕೆಲಸಕ್ಕೆ ಅವರು ಎಂದೂ ಮನಸ್ಸು ಮಾಡಿರಲಿಲ್ಲ. ಈಗ ದೇಶದ್ರೋಹಿಗಳಿಗೆ ಕುಮ್ಮಕ್ಕು ಕೊಡುವಂತೆ ಕಾಂಗ್ರೆಸ್ ಬದಲಾಗಿದೆ. ಇದನ್ನು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅತ್ಯಂತ ಕಠಿಣ ಸ್ಪರ್ಧೆ ನಡೆದರೂ ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣವಿದೆ. ಹಾಸನ, ಮಂಡ್ಯದಲ್ಲಿ ಬಿಜೆಪಿ ಮತ್ತು ಬೆಂಬಲಿತ ಅಭ್ಯರ್ಥಿ ಗೆಲ್ಲುವ ಲಕ್ಷಣವಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತಗಟ್ಟೆ ಹಂತದ ಕಾರ್ಯಕರ್ತರು ಬಹಳ ಗಟ್ಟಿಯಾಗಿದ್ದು, ಮತದಾರರು ಬಿಜೆಪಿ ಪರವಾಗಿದ್ದಾರೆ. ಮೋದಿ ಅವರ ಅಲೆ ಇದೆ ಎಂದರು.

ಗುಲಾಮಗಿರಿಯಿಂದ ಹೊರಬನ್ನಿ: ಕಾಂಗ್ರೆಸ್​ಗೆ ಮುಸ್ಲಿಮರು ರಾಜಕೀಯ ಗುಲಾಮರಾಗಿ ಎಷ್ಟು ದಿನ ಇರುತ್ತೀರಿ? ಇಂತಹ ಗುಲಾಮಗಿರಿಯಿಂದ ಹೊರಗೆ ಬಂದರೆ ಮಾತ್ರ ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ಮತ್ತು ವಿಶ್ವಾಸ ವೃದ್ಧಿಯಾಗುತ್ತದೆ. ಇಲ್ಲದಿದ್ದರೆ ನಿಮ್ಮನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿಯೇ ಇಟ್ಟುಕೊಂಡು ಬಿಜೆಪಿಯನ್ನು ಬೆದರುಗೊಂಬೆಯಾಗಿ ತೋರಿಸಿ ನಿಮ್ಮಲ್ಲಿ ಭಯ ಹುಟ್ಟಿಸುತ್ತ ವೋಟ್ ತೆಗೆದುಕೊಳ್ಳುವ ಕೆಲಸ ಮಾಡುತ್ತೆ ಎಂದು ಸಿ.ಟಿ.ರವಿ ಹೇಳಿದರು. ಮುಸ್ಲಿಮರು ಬಿಜೆಪಿಯನ್ನು ಅನುಮಾನದಿಂದ ನೋಡುವುದನ್ನು ಕಾಂಗ್ರೆಸ್ ಪ್ರಯತ್ನ ಪೂರ್ವಕವಾಗಿ ಹುಟ್ಟುಹಾಕುತ್ತ ಬಂದಿದೆ. ಇದರಿಂದ ಆಗುತ್ತಿರುವ ದೊಡ್ಡ ನಷ್ಟ ಅಲ್ಪಸಂಖ್ಯಾತರಿಗೆ. ಹಿಂದೆ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲೂ ಗೆದ್ದು ಬರುತ್ತಿದ್ದರು. ಈಗ ಯಾವ ಪಕ್ಷವೂ ಸೀಟ್ ಕೊಡಲು ಮುಂದಾಗುತ್ತಿಲ್ಲ ಎಂದರು.

Leave a Reply

Your email address will not be published. Required fields are marked *