ಇಸ್ರೇಲಿಗರ ಮನಗೆದ್ದ ‘ಇ ಅಕ್ಷರಕ್ಕೆ ಈ ಉತ್ತರ’

ಚಿಕ್ಕಮಗಳೂರು: ಆಂಗ್ಲಭಾಷೆಯ ಪ್ರತೀ ಅಕ್ಷರಕ್ಕೂ ಒಂದೊಂದು ಆಂಗ್ಲ ಪದ ಸೃಷ್ಟಿಸಿ ಅರ್ಥವತ್ತಾಗಿ ಸಂಗ್ರಹಿಸಿ, ಸಂಕಲನಗೊಳಿಸಿದ ‘ಇ ಅಕ್ಷರಕ್ಕೆ ಈ ಉತ್ತರ’ ಕೃತಿ ಇಸ್ರೇಲಿಗರ ಮನ ತಟ್ಟಿದೆ.

ಭಾರತೀಯ ಸಂಸ್ಕೃತಿ ಮೇಲಿನ ಆಸಕ್ತಿಯಿಂದ ವರ್ಷಕ್ಕೆರಡು ಬಾರಿ ದೂರದ ಇಸ್ರೇಲ್​ನಿಂದ ತಮ್ಮ ಶಿಷ್ಯರೊಂದಿಗೆ ಹಿರೇಮಗಳೂರಿನ ಶ್ರೀಕೋದಂಡ ರಾಮಚಂದ್ರಸ್ವಾಮಿ ಸನ್ನಿಧಿಗೆ ಆಗಮಿಸುತ್ತಿರುವ ಇಸ್ರೇಲ್​ನ ಸಂಸ್ಕೃತ ವಿದ್ವಾಂಸ ರಫೀಕ್ ಪಲ್ಲೇಟ್ ಇಸ್ರೇಲ್​ನಲ್ಲಿ ಪುಸ್ತಕ ಪ್ರಚುರಪಡಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಸೋಮವಾರ ಒಂಭತ್ತು ಶಿಷ್ಯರ ಜತೆ ಬಂದಿದ್ದ ರಫೀಕ್ ಪಲ್ಲೇಟ್ ಇಲ್ಲಿನ ಧಾರ್ವಿುಕ ಆಚರಣೆ, ಮಹತ್ವ, ರೀತಿ-ನೀತಿಗಳ ಬಗ್ಗೆ ಶಿಷ್ಯರಿಗೆ ಪರಿಚಯಿಸುತ್ತಿದ್ದರು. ಒಂಭತ್ತು ಜನರೂ, ಸಂಸ್ಕೃತ ವಿದ್ಯಾರ್ಥಿಗಳು ಮತ್ತು ಯೋಗಪಟುಗಳಾಗಿದ್ದು, ಶ್ರೀ ಕೋದಂಡರಾಮಚಂದ್ರನ ಪೂಜೆ ವೇಳೆ ತಾವು ಮಂತ್ರ ಪಠಣ ಮಾಡಿ, ವೇದ ವಿದ್ವಾಂಸ ಶ್ರೀ ವೈಷ್ಣವಸಿಂಹರ ಜತೆ ಸಂಸ್ಕೃತ ಹಾಗೂ ಇಂಗ್ಲಿಷನಲ್ಲಿ ಸಂಭಾಷಿಸಿ ಭಾರತೀಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಏನಿದು ‘ಇ ಅಕ್ಷರಕ್ಕೆ ಈ ಉತ್ತರ’?: ಆಂಗ್ಲ ಭಾಷೆಯ ಎ ಯಿಂದ ಝುಡ್​ವರೆಗೆ 26 ಅಕ್ಷರಕ್ಕೂ ಅಕ್ಷರದ ಮೂಲಕ ಒಂದು ಸಕರಾತ್ಮಕ ಪದ ಜೋಡಿಸಿ ರೂಪುಗೊಂಡಿರುವುದೇ ‘ಇ ಅಕ್ಷರಕ್ಕೆ ಈ ಉತ್ತರ’ ಕೃತಿ. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮತ್ತು ಟಿ. ತ್ಯಾಗರಾಜ್ ಈ ಕೃತಿಯ ಕರ್ತೃಗಳು. ಒಂದೊಂದು ಅಕ್ಷರಕ್ಕೂ ಒಂದೊಂದು ವಿಶೇಷ ಅರ್ಥ ಜೋಡಿಸಿದ ಪದ ರೂಪಿಸಿ ಅದರ ಮೂಲಕ ಮತ್ತಷ್ಟು ಪದಗಳನ್ನು ಜೋಡಿಸಿ ಸಂಸ್ಕಾರ ಕಲಿಸುವ ಪ್ರಯತ್ನವೇ ‘ಇ ಅಕ್ಷರಕ್ಕೆ ಈ ಉತ್ತರ’.