ಭ್ರಷ್ಟಾಚಾರ ರೋಗಕ್ಕೆ ನೋಟು ಅಮಾನ್ಯೀಕರಣವೆಂಬ ಕಹಿಔಷಧ ನೀಡಿದೆ: ಪ್ರಧಾನಿ ಮೋದಿ

ಜಬುವಾ: ಬ್ಯಾಂಕಿಂಗ್​ ವ್ಯವಸ್ಥೆಗೆ ಹಣ ವಾಪಸ್​ ತರಲು, ಕಪ್ಪು ಹಣ ಹಾವಳಿ ತಡೆಯಲು ಹಾಗೂ ದೇಶದಲ್ಲಿ ಆಳವಾಗಿ ಬೇರು ಬಿಟ್ಟಿರುವ ಭ್ರಷ್ಟಾಚಾರ ನಿವಾರಣೆಗೆ ಸರಿಯಾದ ಚಿಕಿತ್ಸೆ ಕೊಡುವ ಸಲುವಾಗಿ ನೋಟು ಅಮಾನ್ಯೀಕರಣವೆಂಬ ಕಹಿ ಔಷಧ ನೀಡಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ನ.28ರಂದು ವಿಧಾನಸಭಾ ಚುನಾವಣೆ ನಿಮಿತ್ತ ಛತ್ತೀಸ್​ಗಢದ ಜಬುವಾದಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿ, ಕ್ರಿಮಿಗಳನ್ನುನಿರ್ಮೂಲನೆ ಮಾಡಲು ವಿಷವನ್ನು ಬಳಸುತ್ತೇವೆ. ಅದರಂತೆ ನಾನೂ ಕೂಡ ದೇಶದ ಭ್ರಷ್ಟಾಚಾರವೆಂಬ ರೋಗಕ್ಕೆ ನೋಟು ರದ್ದತಿಯೆಂಬ ಕಹಿ ಔಷಧ ನೀಡಿದೆ ಎಂದು ಹೇಳಿದರು.

ಯಾರು ತೆರಿಗೆ ಕಟ್ಟದೆ ತಮ್ಮ ಹಣವನ್ನು ತಮ್ಮ ಮನೆಯ ಹಾಸಿಗೆ ಅಡಿ, ಕಚೇರಿಯಲ್ಲಿ, ಕಾರ್ಖಾನೆಯಲ್ಲಿ ಬಚ್ಚಿಟ್ಟಿದ್ದರೋ ಅವರೆಲ್ಲ ಈಗ ಸರಿಯಾಗಿ ಟ್ಯಾಕ್ಸ್​ ತುಂಬುತ್ತಿದ್ದಾರೆ. ಆ ಹಣವನ್ನೆಲ್ಲ ಸಾಮಾನ್ಯ ಜನರ ಅವಶ್ಯಕತೆಗಳನ್ನು ಪೂರೈಸುವ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.

ಸಾಲಮನ್ನಾ ಸುಳ್ಳು ಭರವಸೆ
ಕಾಂಗ್ರೆಸ್​ನ ಸಾಲ ಮನ್ನಾ ಭರವಸೆಗಳಿಗೆ ಯಾವ ಕಾರಣಕ್ಕೂ ಮರುಳಾಗಬೇಡಿ ಎಂದು ಪ್ರಧಾನಿ ಮೋದಿ ಮಧ್ಯಪ್ರದೇಶ ರೈತರಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್​ ಸಾಲಮನ್ನಾದ ಸೋಗು ಹಾಕಿ ಜನರನ್ನು ವಂಚಿಸುತ್ತಿದೆ. ಈ ಮೊದಲು ಕರ್ನಾಟಕದ ವಿಧಾನಸಭಾ ಚುನಾವಣೆ ವೇಳೆ ಅಲ್ಲಿಯೂ ಕೂಡ ರೈತರಿಗೆ ಸಾಲಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್​ ಹೇಳಿತ್ತು. ಆದರೆ, ಈಗ ಆ ರೈತರನ್ನು ಜೈಲಿಗೆ ಕಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದರು.

ರೈತರ ಆದಾಯ ಹೆಚ್ಚಳ
2022ರ ವೇಳೆಗೆ ರೈತರ ಆದಾಯವನ್ನು ಎರಡು ಪಟ್ಟು ಹೆಚ್ಚು ಮಾಡುವ ಗುರಿಯನ್ನು ನಮ್ಮ ಬಿಜೆಪಿ ಕೇಂದ್ರ ಸರ್ಕಾರ ಹೊಂದಿದೆ. ನಮ್ಮ ಸರ್ಕಾರ ನಾಲ್ಕು ವರ್ಷಗಳಲ್ಲಿ ಮಾಡಿದಷ್ಟು ಕೆಲಸವನ್ನು ಕಾಂಗ್ರೆಸ್​ ಇನ್ನು 10 ವರ್ಷಗಳಲ್ಲೂ ಮಾಡಲು ಸಾಧ್ಯವಿಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರದಲ್ಲಿದ್ದಾಗ ಜನರಿಗಾಗಿ ಏನು ಮಾಡಿದೆ? ರಾಜ್ಯದ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಮೋದಿ ತಿಳಿಸಿದರು.