ಮಡಿಕೇರಿ:
ಕೊಡಗು ಎಂದ ಕೂಡಲೇ ಇಲ್ಲಿನ ಸವಿಯಾದ ಜೇನು ತುಪ್ಪ ನೆನಪಿಗೆ ಬರುತ್ತದೆ. ಆದರೆ ವಿವಿಧ ಕಾರಣಗಳಿಂದ ಜೇನು ತುಪ್ಪ ಉತ್ಪಾದನೆ ದೊಡ್ಡ ಮಟ್ಟದಲ್ಲಿ ಕ್ಷೀಣಿಸಿದೆ. ‘ನಮ್ಮಲ್ಲಿ ಔಷಧಿಗೂ ಜೇನು ಇಲ್ಲ,’ ಎನ್ನುವುದು ಬಹುತೇಕ ಜೇನು ಕೃಷಿಕರ ಸಾಮಾನ್ಯ ಮಾತು. ಇಷ್ಟಾದರೂ ಜಿಲ್ಲೆಯಲ್ಲಿ ಎಲ್ಲಿ ಹೋದರೂ ಜೇನುತುಪ್ಪ ಮಾರಾಟ ಕಂಡು ಬರುತ್ತದೆ. ಇದರ ಮೂಲ ಹುಡುಕಿದರೆ ಕಳಪೆ, ನಕಲಿ ಜೇನಿನ ಮಾರಾಟ ಜಾಲ ಬಿಚ್ಚಿಕೊಳ್ಳುತ್ತದೆ. ಇದರಿಂದ ಕೊಡಗಿನ ಹೆಸರು ಮಾತ್ರ ಹಾಳಾಗುವುದಲ್ಲದೆ ಇಂಥ ಜೇನು ತುಪ್ಪ ತಿಂದವರ ಆರೋಗ್ಯವೂ ಕೈಕೊಡುವುದು ನಿಶ್ಚಿತ.
ಅಲ್ಲಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಸಾಂಬಾರ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಸಿಗುವ ವಸ್ತುಗಳಿಗೂ ವಿಳಾಸವೇ ಇರುವುದಿಲ್ಲ. ಒಂದೊಮ್ಮೆ ಊಟಿಯಂತೆ ಕೊಡಗಿನ ಹೋಮ್ ಮೇಡ್ ಚಾಕೋಲೇಟ್‌ಗೂ ಭಾರಿ ಬೇಡಿಕೆ ಇತ್ತು. ಇದನ್ನೇ ಬಳಸಿಕೊಂಡ ದಂಧೆಕೋರರು ಇಲ್ಲೂ ಕಳಪೆ ಗುಣಮಟ್ಟದ ಚಾಕೋಲೇಟ್‌ಗಳ ಮಾರಾಟ ಆರಂಭಿಸಿದರು. ಈಗ ಕೊಡಗಿನ ಹೋಮ್ ಮೇಡ್ ಚಾಕೋಲೇಟ್ ಹೆಸರಿನಲ್ಲಿ ಮಾರಾಟವಾಗುವ ಎಲ್ಲಾ ಚಾಕೊಲೇಟ್‌ಗಳನ್ನು ಅನುಮಾನದಿಂದಲೇ ನೋಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಜಿಲ್ಲೆಯಲ್ಲಿ ಮಾರಾಟ ಆಗುತ್ತಿರುವ ಹೋಮ್ ಮೇಡ್ ವೈನ್‌ಗಳ ಕತೆಯೂ ಇದೇ ರೀತಿ ಇದೆ. ವೈನ್ ಅಂಗಡಿಗಳ ಮುಂದೆ ‘ಒಂದು ಖರೀದಿಸಿದರೆ ನಾಲ್ಕು ಉಚಿತ ಎನ್ನುವ’ ಬೋರ್ಡ್ಗಳೇ ಎಲ್ಲವನ್ನೂ ಹೇಳುತ್ತದೆ. ಸೇವಿಸಬಹುದಾದ ಯಾವುದೇ ಪದಾರ್ಥವನ್ನು ಪ್ಯಾಕ್ ಮಾಡಿ ಮಾರಾಟ ಮಾಡಬೇಕಾದರೆ ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ತಯಾರಕರು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ ಹೊಂದಿರಬೇಕು. ತಯಾರಿಸಿದ ದಿನಾಂಕ, ಬಳಸಲಾದ ವಸ್ತುಗಳು ಮತ್ತು ಅದರ ಪ್ರಮಾಣ, ಎಷ್ಟು ದಿನಗಳವರೆಗೆ ಬಳಸಬಹುದು ಎಂಬುದನ್ನು ತಮ್ಮ ಉತ್ಪನ್ನದ ಮೇಲೆ ಸಷ್ಟವಾಗಿ ನಮೂದಿಸಬೇಕು. ತಯಾರಕರ ಮಾಹಿತಿಯನ್ನೂ ಕೊಡಬೇಕು. ಆದರೆ ಇವೆಲ್ಲಾ ಕೇವಲ ನಿಯಮಗಳಲ್ಲಿ ಮಾತ್ರ ಉಳಿದಿದೆ.
ಕೊಡಗಿನ ಹೋಮ್ ಮೇಡ್ ಉತ್ಪನ್ನಗಳ ಗುಣಮಟ್ಟ ಕಾಪಾಡಲು ಏನು ಮಾಡಬಹುದು ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.
ರೋಗಬಾಧೆ ಸೇರಿದಂತೆ ನಾನಾ ಕಾರಣಗಳಿಂದ ಕೊಡಗಿನಲ್ಲಿ ಜೇನು ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಕೊಡಗಿನ ಅಂಗಡಿಗಳಲ್ಲಿ ಜೇನು ತುಂಬಿದ ಬಾಟಲು ಯಥೇಚ್ಛವಾಗಿ ಕಂಡು ಬರುತ್ತಿವೆ. ಬಹುತೇಕ ಕಡೆ ಕಳಪೆ ಗುಣಮಟ್ಟದ ಜೇನು ಮಾರಾಟ ಮಾಡಲಾಗುತ್ತಿದೆ. ಕಳಪೆ ಜೇನಿನಿಂದ ಕೇವಲ ಕೊಡಗಿನ ಮರ್ಯಾದೆ ಹೋಗುವುದಲ್ಲ. ಕಳಪೆ ಜೇನು ತಿಂದ ಮಕ್ಕಳ ಅರೋಗ್ಯ ಆರೋಗ್ಯವೂ ಕೆಡುತ್ತದೆ. ಪ್ರತಿ ಅಂಗಡಿಯಲ್ಲಿ ಸಂಗ್ರಹವಾಗಿರುವ ಜೇನನ್ನು ಪರೀಕ್ಷೆ ಮಾಡಬೇಕು. ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಉತ್ತಯ್ಯ, ಜೇನು ಕೃಷಿಕ, ಇನಕನಹಳ್ಳಿ ಗ್ರಾಮ.
ಕಳಪೆ ಗುಣಮಟ್ಟದ ಜೇನು ವಿಷಕ್ಕೆ ಸಮ. ಅದರೂ ಕೊಡಗಿನಲ್ಲಿ ರಾಜರೋಷವಾಗಿ ಕಳಪೆ ಗುಣಮಟ್ಟದ ಜೇನು ಮಾರಾಟವಾಗುತ್ತದೆ ಎಂಬುದು ನೋವಿನ ಸಂಗತಿ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ತಜ್ಞರ ಪ್ರತ್ಯೇಕ ತನಿಖಾ ತಂಡವನ್ನು ಸ್ಥಾಪಿಸಿ, ಕಳಪೆ ಗುಣಮಟ್ಟದ ಜೇನು ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು.
ಜಾನಕಿ ವೆಂಕಟೇಶ್, ಹಿರಿಯ ಸಹಕಾರಿ, ಚೌಡ್ಲು ಗ್ರಾಮ
ಕೊಡಗಿನ ಜೇನಿಗೆ ವಿಶೇಷವಾದ ಸ್ಥಾನವಿದೆ. ಇಲ್ಲಿ ತಯಾರಾಗುವ ಹೋಮ್ ಮೇಡ್ ಚಾಕಲೇಟ್‌ಗೂ ಬಾರಿ ಬೇಡಿಕೆಯಿದೆ. ಆಹಾರ ಇಲಾಖೆಯ ಅಧಿಕಾರಿಗಳು ಆಗಾಗ ದಾಳಿ ಮಾಡಿ ಗುಣಮಟ್ಟವಿಲ್ಲದ ಉತ್ಪನಗಳನ್ನು ವಶಪಡಿಸಿಕೊಳ್ಳುತ್ತಿರುತ್ತಾರೆ. ಆದರೂ ಅನಧಿಕೃತ ಉತ್ಪಾದಕರು ತಯಾರಿಸುವ ಯಾವುದೇ ಮಾಹಿತಿ ಇಲ್ಲದೇ ಮಾರಾಟ ಮಾಡುವುದರಿಂದ ಮಾರುಕಟ್ಟೆಗೆ ಹೊಡೆತ ನೀಡುತ್ತಿದೆ. ಜನರು ಸ್ವಯಂ ನಿರ್ಧಾರಕ್ಕೆ ಬಂದು ಉತ್ತಮ ತಿನ್ನುವ ಉತ್ಪನಗಳನ್ನು ಮಾತ್ರ ಮಾರುಕಟ್ಟೆಗೆ ನೀಡಬೇಕು.
ಸೈಯದ್ ರಕೀಬ್, ಚಾಕೊಲೇಟ್ ತಯಾರಕರು, ಕುಶಾಲನಗರ
ಉತ್ತಮ ಗುಣಮಟ್ಟದ ಜೇನು, ಹೋಮಮೇಡ್ ವೈನ್, ಚಾಕೊಲೇಟ್ ಇತರೆ ತಿನ್ನುವ ಪದಾರ್ಥಗಳಿಗೆ ಕೊಡಗು ಜಿಲ್ಲೆ ಪ್ರಸಿದ್ಧಿ ಪಡೆದಿತ್ತು. ಈಗ ಕೆಲವರಿಂದ ಕೊಡಗಿನ ಉತ್ಪನಗಳಿಗೆ ಮಾತ್ರವಲ್ಲ ಕೊಡಗಿಗೂ ಕೆಟ್ಟ ಹೆಸರು ಬರುತ್ತಿದೆ. ಅಧಿಕಾರಿಗಳು ಕಟ್ಟುನಿಟ್ಟಾಗಿ ಇಂತಹ ವ್ಯಾಪಾರಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.
ಎಂ.ಡಿ. ಕೃಷ್ಣಪ್ಪ, ಸಾಮಾಜಿಕ ಚಿಂತಕ, ಕುಶಾಲನಗರ
ಕೊಡಗು ಜೇನು ಎಂದರೆ ಅದಕ್ಕೆ ಅದರದ್ದೇ ಆದ ಹೆಸರು ಇದೆ. ಆದರೆ ಇತ್ತೀಚಿಗೆನ ದಿನಗಳಲ್ಲಿ ಪ್ರವಾಸಿಗರಿಗೆ ನಕಲಿ ಜೇನನ್ನು ಕೊಡಗಿನ ಜೇನು ಎಂದು ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೊಡಗಿನ ಹೆಸರು ಹಾಳಾಗುತ್ತಿದೆ. ಸಂಬAಧಪಟ್ಟ ಇಲಾಖೆ ಜೇನಿನ ಗುಣಮಟ್ಟ ಪರೀಕ್ಷಿಸಿ ಮಾರಾಟ ಮಾಡಲು ಅನುಮತಿ ಕೊಡಬೇಕು. ಹಾಗೇ ಚಾಕೋಲೇಟ್ ಮತ್ತು ವೈನ್ ಕೂಡ ಬೇಕಾಬಿಟ್ಟಿಯಾಗಿ ಮಾರಾಟ ಮಾಡುವುದನ್ನು ತಡೆಹಿಡಿಯಬೇಕು. ಗುಣಮಟ್ಟವಲ್ಲದ ಆಹಾರದಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಚೇತನ್ ಕೋಟೇರ, ಗೋಣಿಕೊಪ್ಪ
ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳನ್ನು ಹೇಗೆ ಪರವಾನಗಿ ಪಡೆದು ನಡೆಸಬೇಕೋ… ಕೆಲವೊಂದು ಉತ್ಪನ್ನಗಳನ್ನ ಹೇಗೆ ಮಾರುಕಟ್ಟೆಯಲ್ಲಿ ಮಾರುವ ಮುನ್ನ ಅದರ ಮೌಲ್ಯವನ್ನು ಗುರುತಿಸಲಾಗುತ್ತದೆಯೊ ಹಾಗೇ ರೈತರಿಂದ ಹಾಲನ್ನು ಪಡೆಯುವ ಸಂದರ್ಭದಲ್ಲಿ ಅದರ ಡಿಗ್ರಿಯನ್ನು ಕಂಡು ಹಿಡಿಯಲಾಗುತ್ತದೆಯೋ ಅಂತಹದ್ದೇ ಏನಾದರು ಒಂದು ಪರ್ಯಾಯ ವ್ಯವಸ್ಥೆಯನ್ನು ಮಾಡುವುದರ ಮೂಲಕ ಕೊಡಗಿನ ವಿವಿಧ ವಸ್ತುಗಳ ನಕಲಿ ಮಾರಾಟವನ್ನು ತಡೆಗಟ್ಟಬಹುದು.
ಡಿ. ಸುಜಲಾದೇವಿ, ಪ್ರಾಂಶುಪಾಲರು, ಸುಪ್ರಜಾ ಗುರುಕುಲ, ಶನಿವಾರಸಂತೆ.
ಕೊಡಗಿನಲ್ಲಿ ಹಾದಿ ಬೀದಿಗಳಲ್ಲಿ ಕಳಪೆಯಾದ ಸಾಂಬಾರ ಪದಾರ್ಥಗಳು, ವೈನ್‌ಗಳು, ಜೇನುತುಪ್ಪ ಮಾರಾಟವಾಗುತ್ತಿದೆ. ಆಹಾರ, ನಾಗರಿಕ ಇಲಾಖೆ ತಟಸ್ಥವಾಗಿದೆ. ಭಾಗಮಂಡಲ ಜೇನು ಸಹಕಾರ ಸಂಘದವರು ಕೊಡಗಿನ ಜೇನು ತುಪ್ಪದ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಕೆಲವರು ಇಲ್ಲಿಂದ ಜೇನು ಖರೀದಿಸಿ ಇತರ ಕಳಪೆ ಜೇನು ಜತೆ ಮಿಶ್ರಣ ಮಾಡಿ ಮಾರಾಟ ಮಾಡುವ ಆರೋಪವೂ ಇದೆ. ನಮ್ಮ ಸಂಘ ಗುಣ ಮಟ್ಟ ಕಾಯ್ದುಕೊಂಡು ಗ್ರಾಹಕರಿಗೆ ಉತ್ತಮ ವಸ್ತುಗಳನ್ನು ಪೂರೈಸಲು ಪ್ರಮಾಣಿಕ ಪ್ರಯತ್ನ ನಡೆಸುತ್ತಿದೆ.
ಸೂದನ ಎಸ್. ಈರಪ್ಪ, ಅಧ್ಯಕ್ಷ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ, ಕೊಡಗು
ಮಳಿಗೆಗಳಲ್ಲಿ ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳು ಹಲವೆಡೆ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಕೆಲವದರದ್ದು ಗುಣಮಟ್ಟ ಕಳಪೆ ಎಂದು ಕಂಡು ಬಂದಿದೆ. ಅಂಥವರಿಗೆ ನೊಟೀಸ್ ಕೊಡಲಾಗಿದೆ. ನ್ಯಾಯಾಲಯಕ್ಕೂ ಕಳಿಸಲಾಗುವುದು.
ಡಾ. ಅನಿಲ್ ದವನ್, ಅಂಕಿತಾಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ