ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ

<ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ‘ಸಹಕಾರ ಭೂಷಣ’ ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷ ಪೂರೈಸಿರುವ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣ ನಿಟ್ಟಿನಲ್ಲಿ ನವೋದಯ ಸ್ವಸಹಾಯ ಸಂಘ ಆರಂಭಕ್ಕೆ ಕಾರಣರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿ ಪ್ರದಾನ ಹಾಗೂ ಸಹಕಾರಿ ರಜತ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಜ.19ರಂದು ನಡೆಯುವ ಸಮಾರಂಭಕ್ಕೆ ಮಂಗಳೂರು ನಗರದ ಇತಿಹಾಸದಲ್ಲಿ ಇದೇ ಪ್ರಥಮವಾಗಿ ನಗರದ ನೆಹರು ಮೈದಾನದಲ್ಲಿ 3.53 ಲಕ್ಷ ಚದರ ಅಡಿಯ ವಿಶಾಲ ಸಭಾಂಗಣ ತಲೆ ಎತ್ತಿದೆ. ಸಭಾಂಗಣಕ್ಕೆ ಸಹಕಾರಿ ತತ್ವದ ಬೀಜ ಬಿತ್ತಿದ ಮೊಳಹಳ್ಳಿ ಶಿವರಾಯರ ಹೆಸರಿಡಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿಪ್ರಸಾದ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೆಹರು ಮೈದಾನದ ಫುಟ್‌ಬಾಲ್ ಅಂಗಣದಲ್ಲಿ 210 ಗಣ್ಯರು ಆಸೀನರಾಗಬಹುದಾದ ವಿಶಾಲ ಪ್ರಧಾನ ವೇದಿಕೆ ಹಾಗೂ ಅದರ ಎಡ ಬಲಗಳಲ್ಲಿ ತಲಾ 150 ಮಂದಿ ಆಸೀನರಾಗಲು ಸಹಕಾರಿ ಹಾಗೂ ನವೋದಯ ವೇದಿಕೆಗಳನ್ನು ರಚಿಸಲಾಗಿದೆ.

100 ಸಿಸಿ ಕ್ಯಾಮರಾ ಕಣ್ಗಾವಲು: ಅತ್ಯಂತ ಸುರಕ್ಷಿತ ಹಾಗೂ ಶಿಸ್ತುಬದ್ಧ ಕಾರ್ಯಕ್ರಮ ನಿರ್ವಹಿಸಲು ಪೂರಕವಾಗಿ 100 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವೇದಿಕೆಯ ಕಾರ್ಯಕ್ರಮ ಸಭಾಂಗಣದ ಮೂಲೆಮೂಲೆಗೂ ವೀಕ್ಷಿಸುವಂತಾಗಲು 25 ಎಲ್‌ಇಡಿ ಟಿವಿ ಪರದೆಗಳ ವ್ಯವಸ್ಥೆ. ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. 1000 ಸ್ವಯಂಸೇವಕರು, ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿಗಳು, ವಿಐಪಿಗಳು ಹಾಗೂ ಇತರ ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಡಾ.ಎಂ.ಎನ್. ರಾಜೇಂದ್ರಕುಮಾರ್ ಅವರಿಗೆ ಸಹಕಾರ ಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷರಾಗಿ, ರಾಷ್ಟ್ರದ ಪ್ರತಿಷ್ಠಿತ ಸಹಕಾರ ಸಂಸ್ಥೆ ಇಫ್ಕೋದ ನಿರ್ದೇಶಕರಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ಸಹಕಾರ ಛಾಪು ಮೂಡಿಸಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅಭಿನಂದನಾ ಸಮಿತಿ ಪ್ರಮುಖರಾದ ರಾಜು ಪೂಜಾರಿ, ಶಶಿಕಿರಣ್, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಸುನೀಲ್ ಕುಮಾರ್ ಬಜಗೋಳಿ, ದೇವರಾಜ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಇಂದು ವಿಚಾರ ಸಂಕಿರಣ: ರಜತ ಸಂಭ್ರಮ ಅಂಗವಾಗಿ ಜ.18ರಂದು ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ‘ಸಹಕಾರ ಕ್ಷೇತ್ರ ಅಂದು- ಇಂದು- ಮುಂದು’, ‘ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು’ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣ ಉದ್ಘಾಟನೆಗೊಳ್ಳಲಿದೆ.

ಬೆಳಗ್ಗೆ 9 ಗಂಟೆಗೆ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ರಜತ ಸಂಭ್ರಮವನ್ನು ಅವಿಸ್ಮರಣೀಯವಾಗಿಸಲು ಶಾಶ್ವತ ಸಹಕಾರಿ ಮ್ಯೂಸಿಯಂನ ಉದ್ಘಾಟನೆ ನಡೆಯಲಿದೆ. ಬಳಿಕ 9.30ಕ್ಕೆ ಬ್ಯಾಂಕ್ ಆವರಣದಿಂದ ನೆಹರು ಮೈದಾನಕ್ಕೆ ಮೆರವಣಿಗೆ ಹೊರಡಲಿದೆ. ಮೆರವಣಿಗೆಯಲ್ಲಿ ಸುಮಾರು 25000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 61 ಕಲಾ ತಂಡಗಳಿದ್ದು, 100 ಚೆಂಡೆಗಳ ಪ್ರತ್ಯೇಕ ಒಂದು ತಂಡ ವಿಶೇಷ ಆಕರ್ಷಣೆ ನೀಡಲಿದೆ.
| ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ ಅಭಿನಂದನಾ ಸಮಿತಿ ಅಧ್ಯಕ್ಷ

*************

ಸಹಕಾರಿ ಕ್ಷೇತ್ರದ ಬಲವರ್ಧನೆ ಕನಸು ಸಾಕಾರ
* ಡಾ.ಎಂ.ಎನ್.ರಾಜೇಂದ್ರಕುಮಾರ್ ವಿಶೇಷ ಸಂದರ್ಶನ

ಶತಮಾನದ ಇತಿಹಾಸವಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಯಶಸ್ವಿ 25 ವರ್ಷ ಪೂರೈಸುತ್ತಿರುವ ಡಾ.ಎಂ.ಎನ್.ರಾಜೇಂದ್ರಕುಮಾರ್ ಸಹಕಾರಿ ಕ್ಷೇತ್ರದ ಅದ್ವಿತೀಯ ಸಾಧಕ. ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಮುನ್ನಡೆಸಿದ ಸಹಕಾರಿ ರತ್ನ. 25 ವರ್ಷ ಅವರು ಸಲ್ಲಿಸಿದ ಸಾರ್ಥಕ ಸೇವೆಯ ರಜತ ಸಂಭ್ರಮ ಮತ್ತು ನವೋದಯ ಸ್ವ-ಸಹಾಯ ಸಂಘಗಳ ವಿಂಶತಿ ಸಮಾವೇಶ ಜ.19ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಾ.ಎಂ.ಎನ್.ರಾಜೇಂದ್ರಕುಮಾರ್‌ರೊಂದಿಗೆ ‘ವಿಜಯವಾಣಿ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

* ನೀವು ಸಾಗಿ ಬಂದ ಹಾದಿಯನ್ನು ಹೇಗೆ ನೆನಪಿಸಲು ಬಯಸುತ್ತೀರಿ?
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿದ್ದೆ. ಬಳಿಕ ಅದೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷನಾಗುವ ಅವಕಾಶ ದೊರೆತದ್ದು ನನ್ನ ಭಾಗ್ಯ. 25 ವರ್ಷದ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಸಂಕಲ್ಪ ತಳೆದೆ. ಮೊಳಹಳ್ಳಿ ಶಿವರಾಯರ ಆದರ್ಶ ನಮ್ಮ ಮುಂದಿತ್ತು. ಬ್ಯಾಂಕ್‌ನ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ನೀಡಿದ ಸಹಕಾರದಿಂದ ಇಂದು ನಾವು ದೇಶವೇ ಗಮನಹರಿಸುವಂತ ಸಾಧನೆ ಮಾಡಿದ್ದೇವೆ.

* ಸಹಕಾರಿ ಕ್ಷೇತ್ರದ ಬದಲಾವಣೆ ಹೇಗೆ ಸಾಧ್ಯವಾಯಿತು ?
ಸ್ಪಷ್ಟ ಗುರಿ, ಬದ್ಧತೆ ಮತ್ತು ಪ್ರಾಮಾಣಿಕ ಸೇವೆಯಿಂದ ಇದು ಸಾಧ್ಯವಾಗಿದೆ. ಕರಾವಳಿ ಜಿಲ್ಲೆಯ ಸಹಕಾರಿ ಸಂಘಗಳು ಇಂದು ವಾಣಿಜ್ಯ ಬ್ಯಾಂಕ್‌ಗಳನ್ನು ಮೀರಿ ಸೇವೆ ನೀಡುತ್ತಿವೆ. ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನನ್ನ ಕನಸು ಸಾಕಾರಗೊಂಡ ತೃಪ್ತಿ ಇದೆ.

* ನವೋದಯ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದ ಬಗ್ಗೆ?
ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಎರಡು ದಶಕದ ಹಿಂದೆ ನವೋದಯ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದೆವು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಆಶೀರ್ವಾದ ನೀಡುವ ಮೂಲಕ ನಮ್ಮ ಕಾರ್ಯಕ್ಕೆ ಸ್ಪೂರ್ತಿ ನೀಡಿದರು. ಇಂದು ಐದು ಜಿಲ್ಲೆಯ 32 ಸಾವಿರಕ್ಕೂ ಅಧಿಕ ಸ್ವಸಹಾಯ ಸಂಘಗಳಲ್ಲಿ ಸುಮಾರು 5 ಲಕ್ಷ ಸದಸ್ಯರಿದ್ದಾರೆ. ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಕ್ರಾಂತಿಯಾಗಿದೆ.

* ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತರ ಬ್ಯಾಂಕ್‌ಗಳಿಗಿಂತ ಹೇಗೆ ಭಿನ್ನ?
ನಮ್ಮ ಕೇಂದ್ರ ಶಾಖೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸೇವೆ ನೀಡುತ್ತಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಿದ ಹೆಮ್ಮೆ ನಮ್ಮದು. ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಇರುವ ಎಲ್ಲ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದೇವೆ. ಪ್ರತಿವರ್ಷ ನಮ್ಮಲ್ಲಿ ಶೇ.100 ಕೃಷಿ ಸಾಲ ಮರು ಪಾವತಿಯಾಗುತ್ತದೆ. ಎರಡು ದಶಕದ ಹಿಂದೆ 40 ಇದ್ದ ನಮ್ಮ ಶಾಖೆಗಳ ಸಂಖ್ಯೆ ಇಂದು 105ಕ್ಕೇರಿದೆ.

* ರಜತ ಸಂಭ್ರಮ ನೆನಪಿಗೆ ಶಾಶ್ವತ ಯೋಜನೆ?
ಕರಾವಳಿಯನ್ನು ಸಹಕಾರಿ ಕ್ಷೇತ್ರವನ್ನು ಕಟ್ಟಿ ಬೆಳೆಸಿದ ಮೊಳಹಳ್ಳಿ ಶಿವರಾಯರ ಪ್ರತಿಮೆ ಸ್ಥಾಪನೆ, ಸಹಕಾರಿ ಕ್ಷೇತ್ರದ ಸಮಗ್ರ ಮಾಹಿತಿ ನೀಡುವ ಮ್ಯೂಸಿಯಂ, ಸಹಕಾರಿ ಗ್ರಂಥಾಲಯ ಮತ್ತು ಸಹಕಾರಿ ಆಸ್ಪತ್ರೆ ಸ್ಥಾಪಿಸುವ ಚಿಂತನೆ ಇದೆ.

* ನೀವು ರಾಜಕೀಯದಲ್ಲಿ ಸಕ್ರಿಯರಾಗುವ ಇರಾದೆ ಇದೆಯಾ?
ಸಹಕಾರಿ ಕ್ಷೇತ್ರದಲ್ಲಿ ಇಷ್ಟು ವರ್ಷ ರಾಜಕೀಯ ರಹಿತವಾಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ನನಗೆ ಬಹಳಷ್ಟು ಅವಕಾಶ ಬಂದಿತ್ತು. ಆಗ ನಾನು ನಿರಾಕರಿಸಿದೆ. ಭವಿಷ್ಯದ ಬಗ್ಗೆ ಈಗಲೇ ಹೇಳುವಂತಿಲ್ಲ. ರಾಜಕೀಯ ಪ್ರವೇಶಿಸಲೂಬಹುದು.

* ರಜತ ಸಂಭ್ರಮವನ್ನು ಬಹಳ ಅದ್ದೂರಿಯಾಗಿ ಸಂಘಟಿಸಿರುವ ಬಗ್ಗೆ?
ಸಹಕಾರಿ ಕ್ಷೇತ್ರದಲ್ಲಿ ನಾವು ಸಲ್ಲಿಸಿದ ಸೇವೆಗೆ ಜನತೆ ನೀಡಿದ ಗೌರವ ಎಂದು ಭಾವಿಸಿದ್ದೇನೆ. ಉತ್ತಮ ಸೇವೆ ಮಾಡಿದರೆ ಸಮಾಜ ಗುರುತಿಸುತ್ತದೆ ಎನ್ನುವ ಸಂದೇಶ ಈ ಕಾರ್ಯಕ್ರಮದ ಮೂಲಕ ಪಸರಿಸಲಿದೆ.