ರಿಸ್ಯಾಟ್-2ಬಿ ಉಪಗ್ರಹ ಇಂದು ನಭಕ್ಕೆ: ಪಿಎಸ್​ಎಲ್​ವಿ-ಸಿ46 ಮೂಲಕ ಉಡಾವಣೆ

ಶ್ರೀಹರಿಕೋಟಾ: ಭಾರತದ ಪ್ರಮುಖ ಕಣ್ಗಾವಲು ಉಪಗ್ರಹ ಎಂದೇ ಪರಿಗಣಿಸಲಾಗುತ್ತಿರುವ ರೇಡಾರ್ ಇಮೇಜಿಂಗ್ ಸೆಟಲೈಟ್-2ಬಿ (ರಿಸ್ಯಾಟ್-2ಬಿ)ಯನ್ನು ನಭಕ್ಕೆ ಹೊತ್ತೊಯ್ಯಲಿರುವ ಪಿಎಸ್​ಎಲ್​ವಿ -ಸಿ46 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಗ್ಗೆ 5.30ಕ್ಕೆ ಉಡಾವಣೆಯಾಗುವ ಈ ರಾಕೆಟ್, 15 ನಿಮಿಷದಲ್ಲಿ 557 ಕಿ.ಮೀ. ದೂರದ ಕಕ್ಷೆ ತಲುಪಲಿದೆೆ.

615 ಕೆ.ಜಿ. ತೂಕದ ರಿಸ್ಯಾಟ್-2ಬಿಯಿಂದ ಭಾರತದ ಕಣ್ಗಾವಲು ವ್ಯವಸ್ಥೆ ಸುಧಾರಿಸಲಿದ್ದು, ನೈಸರ್ಗಿಕ ವಿಕೋಪ ನಿರ್ವಹಣೆ, ಅರಣ್ಯ ಮತ್ತು ಕೃಷಿ ಕ್ಷೇತ್ರಕ್ಕೂ ಇದು ನೆರವು ನೀಡಲಿದೆ. ಈ ಸೆಟಲೈಟ್​ನ ಜೀವಿತಾವಧಿ ಐದು ವರ್ಷ.

ಉಗ್ರ ನಿಗ್ರಹದಲ್ಲಿ ಪ್ರಮುಖ ಪಾತ್ರ: ಭಾರತ ಈಗಾಗಲೇ ಹಲವು ಕಣ್ಗಾವಲು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಸಾಮಾನ್ಯ ರಿಮೋಟ್ ಸೆನ್ಸಿಂಗ್ ಅಥವಾ ಆಪ್ಟಿಕಲ್ ಇಮೇಜಿಂಗ್ ವ್ಯವಸ್ಥೆ ಇರುತ್ತದೆ. ಇವುಗಳು ಬೆಳಕನ್ನು ಆಧರಿಸಿದ ಕ್ಯಾಮರಾ ಹೊಂದಿವೆ. ಇದರಿಂದ ಸೂಕ್ಷ್ಮ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದು ಕಷ್ಟ. ಆದರೆ, ರಿಸ್ಯಾಟ್-2ಬಿಯಲ್ಲಿ ಆಕ್ಟಿವ್ ಸೆನ್ಸರ್ ಸಿಂಥೆಟಿಕ್ ಅಪಾರ್ಚರ್ ರೇಡಾರ್(ಎಸ್​ಎಆರ್) ಕ್ಯಾಮರಾ ಇದೆ. ಇದರಿಂದ ಭೂಮಿ ಮೇಲಿನ ಚಟುವಟಿಕೆಯನ್ನು ಹದ್ದಿನ ಕಣ್ಣಿನಿಂದ ಗಮನಿಸಲು ಸಾಧ್ಯ ಮತ್ತು ಇದು ಹಗಲು-ರಾತ್ರಿ, ಮಳೆ-ಮೋಡ ಲೆಕ್ಕಿಸದೆ ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಇದರಿಂದ ಶತ್ರು ದೇಶದ ಮೇಲೆ ಭದ್ರತಾ ಪಡೆ ನಿಗಾ ಇರಿಸಬಹುದು ಮತ್ತು ನೈಸರ್ಗಿಕ ವಿಕೋಪ ಸಂದರ್ಭದ ಕಾರ್ಯಾಚರಣೆಯಲ್ಲೂ ಎಸ್​ಎಆರ್ ಒದಗಿಸುವ ಮಾಹಿತಿ ಮುಖ್ಯ ಪಾತ್ರ ವಹಿಸುತ್ತದೆ.

ಸೆಟಲೈಟ್ ವಿಶೇಷ…

  • ಸರ್ವಋತು ಮತ್ತು ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಣೆಯ ಕ್ಷಮತೆ
  • ನೈಸರ್ಗಿಕ ವಿಕೋಪ ನಿರ್ವಹಣೆ, ಕೃಷಿ, ಅರಣ್ಯ ಸಂರಕ್ಷಣೆಗೆ ಸಹಕಾರಿ
  • ಉಪಗ್ರಹದ ತೂಕ 615 ಕೆ.ಜಿ.
  • 557 ಕಿ.ಮೀ. ದೂರದ ಕಕ್ಷೆಯಲ್ಲಿ ಕಾರ್ಯನಿರ್ವಹಣೆ
  • 5 ವರ್ಷಗಳ ಜೀವಿತಾವಧಿ
  • ಎಸ್​ಎಆರ್ ಕ್ಯಾಮರಾದಿಂದ ಭೂಮಿ ಮೇಲಿನ ಸೂಕ್ಷ್ಮ ಚಟುವಟಿಕೆ ಮೇಲೆ ನಿಗಾ

ರಿಸ್ಯಾಟ್-2ಬಿ ಉಪಗ್ರಹದಿಂದ ಮೂಲಕ ಗಡಿ ಭಾಗದಲ್ಲಿ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಉಗ್ರರ ನೆಲೆ, ತರಬೇತಿ ಕೇಂದ್ರಗಳನ್ನು ಗುರುತಿಸಿ ಅಲ್ಲಿನ ಚಟುವಟಿಕೆಗಳನ್ನೂ ಗಮನಿಸಬಹುದು

| ಕೆ. ಶಿವನ್ ಇಸ್ರೋ ಅಧ್ಯಕ್ಷ

Leave a Reply

Your email address will not be published. Required fields are marked *