ಬೆಂಗಳೂರು: ಸರ್ಕಾರಿ ಹುದ್ದೆಗಳಿಗೆ ಹೊಸದಾಗಿ ನೇಮಕವಾದವರಿಗೆ ಕೌನ್ಸೆಲಿಂಗ್ ಮುಖೇನ ಮೀಸಲು ನಿಯಮ, ಶ್ರೇಯಾಂಕ ಆಧಾರದಲ್ಲಿ ಸ್ಥಳ ನಿಯಕ್ತಿಗೊಳಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಇಲಾಖೆಗಳಲ್ಲಿ ಜಾರಿಯಲ್ಲಿ ಈ ವ್ಯವಸ್ಥೆಯು ಲೋಕೋಪಯೋಗಿ ಇಲಾಖೆಗೂ ಕಾಲಿಟ್ಟಿದೆ.
ಇಲಾಖೆಗೆ ಹೊಸದಾಗಿ ನೇಮಕವಾದ ಸಹಾಯಕ ಮತ್ತು ಕಿರಿಯ ಇಂಜಿನಿಯರ್‌ಗಳನ್ನು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ಸರ್ಕಾರ ಆದೇಶಿಸಿದೆ. ಸ್ಥಳ ನಿಯುಕ್ತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮವಹಿಸಿ, ಕೌನ್ಸೆಲಿಂಗ್‌ಗೆ ಪಾಲಿಸಬೇಕಾದ ಷರತ್ತುಗಳನ್ನು ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 660 ಸಹಾಯಕ ಇಂಜಿನಿಯರ್ ಮತ್ತು 330 ಕಿರಿಯ ಇಂಜಿನಿಯರ್‌ಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ. ಈಗಾಗಲೇ ಸ್ಥಳ ನಿಯುಕ್ತಿಗೊಳಿಸಿರುವುದನ್ನು ಅವರುಗಳು ವೇತನ ಬಿಡುಗಡೆ ಹಾಗೂ ತರಬೇತಿಗೆ ನಿಯೋಜಿಸುವ ಉದ್ದೇಶದಿಂದ ಹುದ್ದೆಯ ಲೀನ್ ನಿಗದಿಪಡಿಸಲಾಗಿದೆ ಎಂದು ಪರಿಗಣಿಸಲು ತಿಳಿಸಿದೆ.
ಸ್ಥಳ ನಿಯುಕ್ತ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನೇಮಕ ಪ್ರಾಧಿಕಾರವಾದ ಮುಖ್ಯ ಇಂಜಿನಿಯರ್ ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಇವರಿಗೆ ನಿರ್ದೇಶಿಸಿ ಲೋಕೋಪಯೋಗಿ ಇಲಾಖೆ ಆದೇಶಿಸಿದೆ.
ಷರತ್ತುಗಳು
– ಈಗಾಗಲೇ ಸ್ಥಳ ನಿಯುಕ್ತಿಗೊಳಿಸಿರುವ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್ ಒಳಗೊಂಡು ದಾಖಲೆಗಳನ್ನು ಪರಿಶೀಲಿಸಿ, ನೇಮಕ/ ಸ್ಥಳ ನಿಯುಕ್ತ ಆದೇಶ ಬಾಕಿಯಿರುವ ಎಇ, ಜೆಇಗಳನ್ನು ಸಹ ಕೌನ್ಸಲಿಂಗ್ ಪ್ರಕ್ರಿಯೆಗೆ ಒಳಪಡಿಸಬೇಕು.
– ನೇರ ನೇಮಕಾತಿಗೆ ನಿಗದಿಪಡಿಸಿರುವ ಮೀಸಲಾತಿ ರೋಸ್ಟರ್‌ಗಳನ್ನು ಗಣನೆಗೆ ತೆಗೆದುಕೊಂಡು ರ‌್ಯಾಂಕಿಂಗ್ ಆಧಾರ ಸೇರಿ ನಾಲ್ಕು ಷರತ್ತುಗಳ ಅನ್ವಯ ಕೌನ್ಸೆಲಿಂಗ್ ಪ್ರಕ್ರಿಯೆ ಕೈಗೆತ್ತಿಕೊಳ್ಳಬೇಕು. ಅಂಗವಿಕಲ ಅಧಿಕಾರಿಗಳ ಕುರಿತು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆದ್ಯತೆ ಮೇಲೆ ಪರಿಗಣಿಸಬೇಕು.
– ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್‌ಗಳಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಕೈಗೊಳ್ಳಬೇಕು
– ನಿಗದಿಪಡಿಸಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಇತರ ಕಾರಣಗಳಿಂದ ಭಾಗವಹಿಸದಿದ್ದರೆ ಅವರ ಜವಾಬ್ದಾರಿಯಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಜಾರಿ ಅಥವಾ ನಂತರ ಅರ್ಹತೆ ಆಧಾರದ ಮೇಲೆ ಪರಿಗಣಿಸಬೇಕು
– ಸ್ಥಳನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಹಾಗೂ ಕೌನ್ಸೆಲಿಂಗ್ ಮುಖಾಂತರ 20 ದಿನಗಳೊಳಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಸ್ಥಳ ನಿಯುಕ್ತಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.