ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಅರ್ಹ ಮತದಾರರ ಹೆಸರು ನೋಂದಾಯಿಸಲು ನಿಗದಿತ ಅವಧಿ ವಿಸ್ತರಿಸಲು ಪ್ರತಿಪಕ್ಷ ಬಿಜೆಪಿ ಮೊರೆಯಿಟ್ಟಿದೆ. ಅರ್ಹರು ತಮ್ಮ ಹಕ್ಕು ಚಲಾಯಿಸಲು ಮತದಾರರ ಯಾದಿಗೆ ಸೇರಿಸಲು ಅವಕಾಶ ಕೊಡಬೇಕು ಎಂದು ವಿನಂತಿಸಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪಕ್ಷದ ನಿಯೋಗವು ಶನಿವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿ, ನವೆಂಬರ್ 6ರವರೆಗೆ ನಿಗದಿಯಾಗಿರುವ ಅವಧಿಯನ್ನು ಡಿಸೆಂಬರ್ 6ರವರೆಗೆ ವಿಸ್ತರಿಸಲು ಕೋರಿದೆ.
ಸೆಪ್ಟೆಂಬರ್‌ನಲ್ಲಿ ಶಾಲಾ-ಕಾಲೇಜುಗಳಿಗೆ ಅರ್ಧ ವಾರ್ಷಿಕ ರಜೆ, ಹಬ್ಬಗಳ ಸರಣಿ, ಸಾಲುಗಟ್ಟಿ ಬಂದ ರಜೆಗಳಿಂದಾಗಿ ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ. ಅರ್ಹ ಮತದಾರರು, ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಕಾರ್ಯಕರ್ತರು ರಜೆಯಲ್ಲಿದ್ದರು.
ಬೆಂಗಳೂರು ನಗರವೊಂದರಲ್ಲಿಯೇ 50 ಲಕ್ಷ ಮತದಾರರಿದ್ದಾರೆ. ಅರ್ಹರೆಲ್ಲರಿಗೂ ಮತದಾನದ ಹಕ್ಕು ಸಿಗುವಂತಾಗಬೇಕು. ಮತದಾರರ ಯಾದಿಯಿಂದ ಹೊರಗಿರುವವರನ್ನು ಸೇರಿಸಲು ನಿಗದಿತ ಗಡುವು ವಿಸ್ತರಿಸಬೇಕು ಎಂದು ಬಿಜೆಪಿ ಮನವಿಯಲ್ಲಿ ವಿವರಿಸಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದ ಬಿಜೆಪಿ ನಿಯೋಗದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್, ಕೇಂದ್ರ ಜಿಲ್ಲಾ ಅಧ್ಯಕ್ಷ ಜಿ.ಮಂಜುನಾತ್, ವಕೀಲರ ಸಂಘದ ವಿವೇಕ್ ರೆಡ್ಡಿ ಇನ್ನಿತರರು ಇದ್ದರು.