ಖಾದಿ ಖದರ್

ಎಂಎನ್​ಸಿಗಳ ಏದುಸಿರಿನ ನಡುವೆ ಗರಿಗೆದರಿದ ದೇಸಿ ಉದ್ಯಮ

| ಕೆ.ಎನ್‌. ಬಾನುಪ್ರಸಾದ್‌

ರಾಷ್ಟ್ರೀಯತೆಯ ಸಂಕೇತವಾಗಿದ್ದ ಖಾದಿಗೆ ಈಗ ಆಧುನಿಕತೆಯ ಸ್ಪರ್ಶ. ಇತ್ತೀಚೆಗೆ ಖಾದಿ ಉತ್ಪನ್ನಗಳ ಮಾರುಕಟ್ಟೆ ದುಪ್ಪಟ್ಟಾಗಿದ್ದು, ಜನಸಾಮಾನ್ಯರಲ್ಲದೆ ಸ್ಥಿತಿವಂತರ ಮನೆ-ಮನಗಳನ್ನೂ ಅಲಂಕರಿಸುತ್ತಿದೆ. 2018ರಲ್ಲಿ ಖಾದಿ ಉದ್ಯಮದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 50,000 ಕೋಟಿ ರೂಪಾಯಿ ದಾಟಿದೆ. ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಏದುಸಿರು ಬಿಡುತ್ತಿರುವ ಸಂದರ್ಭದಲ್ಲಿ ಈ ದೇಸಿ ಉದ್ಯಮ ಗರಿಗೆದರಿ ನಿಂತಿರುವುದು ಸೋಜಿಗ.

ಸ್ವಾತಂತ್ರ್ಯ ಸಮರದ ಸಂದರ್ಭದಲ್ಲಿ ಇಡೀ ದೇಶವನ್ನೇ ತನ್ನ ನೂಲಿನಿಂದ ಒಗ್ಗೂಡಿಸಿದ್ದು ‘ಖಾದಿ’. ಆದರೆ, ನಂತರ ಜಾಗತೀಕರಣದ ಕೂಸಾಗಿ ಜನಿಸಿದ ಕೊಳ್ಳುಬಾಕ ಸಂಸ್ಕೃತಿಯ ಎದುರು ಖಾದಿಯ ಬಣ್ಣ ಕೊಂಚ ಮಾಸಿತ್ತು. ಈಗ ಕಾಲ ಬದಲಾಗಿದೆ. ಖಾದಿ ಗಾಂಧಿವಾದಿಗಳಿಗಷ್ಟೇ ಸೀಮಿತವಾಗದೆ, ಯುವಕ ಯುವತಿಯರ ಇಷ್ಟದ ಆಯ್ಕೆಯಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಖಾದಿ ಉತ್ಪನ್ನಗಳ ಬೇಡಿಕೆ ದಾಖಲೆಯ ಏರಿಕೆ ಕಂಡಿದೆ. ಬಹುರಾಷ್ಟ್ರೀಯ ಕಂಪನಿಗಳು ಕೂಡ ಅಚ್ಚರಿಪಡುವಂತೆ ಖಾದಿ ವಸ್ತುಗಳು ಬಿಕರಿಯಾಗುತ್ತಿವೆ. 2018ರಲ್ಲಿ ಖಾದಿ ಉತ್ಪನ್ನಗಳ ಬೇಡಿಕೆ ಎಷ್ಟಿತ್ತೆಂದರೆ, ಜಾಗತಿಕ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಸ್ಪರ್ಧಿಯಾಗಿರುವ ಹಾಗೂ ಗ್ರಾಹಕರನ್ನು ಸೆಳೆಯಲು ಕೋಟ್ಯಂತರ ರೂಪಾಯಿ ಹಣ ಸುರಿಯುತ್ತಿರುವ ಕಂಪನಿಗಳು ಕೂಡ ಖಾದಿ ಉತ್ಪನ್ನಗಳ ಮಾರಾಟ ಪ್ರಮಾಣದ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯೂರ್ವದಿಂದಲೂ ಖಾದಿ ಮತ್ತು ರೇಷ್ಮೆ ವಸ್ತ್ರಗಳು ತಮ್ಮ ವೈಭವವನ್ನು ಉಳಿಸಿಕೊಂಡೇ ಬಂದಿವೆ. ರೇಷ್ಮೆ ಹಣವಂತರ ಉಡುಪು ಎನಿಸಿದ್ದರೆ, ಖಾದಿ ಜನಸಾಮಾನ್ಯರ ಉಡುಪಾಗಿ ಮನ ಗೆದ್ದಿದೆ. ಇದು ಈಗ ಮತ್ತೊಮ್ಮೆ ಸಾಬೀತಾಗುತ್ತಿದೆ ಅಷ್ಟೆ. 2017ರ ಆರ್ಥಿಕ ವರ್ಷದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉದ್ಯಮದಿಂದ 49,991.61 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಶೇಕಡಾ 24.26ರಷ್ಟು ಬೆಳವಣಿಗೆ ದಾಖಲಾಗಿದೆ. ಇದುವರೆಗೆ ಯಾವುದೇ ಖಾಸಗಿ ಕ್ಷೇತ್ರವೂ ಇಷ್ಟು ಪ್ರಮಾಣದ ಬೆಳವಣಿಗೆ ದರ ಸಾಧಿಸಿಲ್ಲ.

ಖಾದಿಯ ಹಿರಿಮೆ

ಖಾದಿ ಆಯೋಗ ದೇಶಾದ್ಯಂತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ.ಜಾತಿ, ಪ.ಪಂಗಡ, ಒಬಿಸಿ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಯೋಧರು, ನಿರಾಶ್ರಿತರು ಮೊದಲಾದವರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಗ್ರಾಮೀಣ ಕಸುಬುದಾರರಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಜತೆಗೆ ಅಗತ್ಯ ತರಬೇತಿ ನೀಡಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುತ್ತಿದೆ. ಈ ಮೂಲಕ ಗ್ರಾಮೀಣ ಜನತೆ ನಗರಗಳತ್ತ ವಲಸೆ ಬರುವುದನ್ನು ನಿಯಂತ್ರಿಸುತ್ತಿದೆ. ಹೇರಳ ಮಾನವ ಸಂಪನ್ಮೂಲ ಹೊಂದಿರುವ ಗ್ರಾಮೀಣ ಭಾಗದ ಜನತೆಗೆ ಬೇಸಾಯದ ಜತೆಗೆ ಗ್ರಾಮೋದ್ಯೋಗ ಒದಗಿಸಿ ಗ್ರಾಮಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತ ಹೆಜ್ಜೆ ಇಟ್ಟಿದೆ.

ಕ್ಷಿಪ್ರ ಬೆಳವಣಿಗೆಗೆ ಕಾರಣಗಳು ಮೂರು

ಹೆಚ್ಚು ಉದ್ಯಮಶೀಲರಿಗೆ ಆರ್ಥಿಕ ಸಹಾಯ: ಕಳೆದ 5 ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಕಾರ್ಯಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ಮೊದಲೆಲ್ಲ ಕೇವಲ ಸಂಸ್ಥೆಗಳಿಗೆ ಧನಸಹಾಯ ಮಾಡುತ್ತಿದ್ದ ಆಯೋಗ ತನ್ನ ಆರ್ಥಿಕ ಸಹಾಯದ ಮಾನದಂಡವನ್ನು ಬದಲಾಯಿಸಿಕೊಂಡಿದೆ. ಪ್ರಸ್ತುತ, ಉತ್ತಮ ಯೋಜನೆಗಳನ್ನು ಪ್ರಸ್ತಾಪಿಸಿದ ಯಾರಿಗೇ ಆದರೂ ಧನಸಹಾಯ ನೀಡುತ್ತಿದೆ. ಅದು ಸರ್ಕಾರೇತರ ಸಂಘಟನೆಯೇ ಆಗಿರಬಹುದು ಅಥವಾ ಗ್ರಾಮೋದ್ಯೋಗ ಸಂಸ್ಥೆಯೇ ಆಗಿರಬಹುದು. ಪ್ರಸ್ತುತ ಆಯೋಗದ ವ್ಯಾಪ್ತಿಯಲ್ಲಿ 2500ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಯೋಜನೆಗೆ ಗರಿಷ್ಠ 25 ಲಕ್ಷ ರೂಪಾಯಿವರೆಗೂ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತದೆ. ಜತೆಗೆ ಭಾಗಶಃ ಹಣವನ್ನು ಸಹಾಯಧನವಾಗಿ ನೀಡುತ್ತದೆ. ಆದರೆ, ಉದ್ಯಮದಾರ ಒಟ್ಟು ಯೋಜನಾ ವೆಚ್ಚದ ಶೇ.10ರಷ್ಟನ್ನು ಸ್ವತಃ ಹೂಡಿಕೆ ಮಾಡಿರಬೇಕು. ಜತೆಗೆ ಕನಿಷ್ಠ 20 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಸಾಲ ನೀಡುವ ಮಾನದಂಡ ಬದಲಾದ ನಂತರ ಆಯೋಗವು ಪ್ರತಿವರ್ಷ ಕನಿಷ್ಠ 1 ಲಕ್ಷ ಯೋಜನೆಗಳಿಗೆ ಆರ್ಥಿಕ ಸಹಾಯ ಒದಗಿಸುವ ಗುರಿ ಹೊಂದಿತ್ತು. 2019ರ ಆರ್ಥಿಕ ವರ್ಷದಲ್ಲಿ ಈ ಗುರಿ 1,90,000 ಯೋಜನೆಗಳಿಗೆ ಏರಿಕೆಯಾಗಿದೆ. ಇದಲ್ಲದೆ ದೆಹಲಿ, ಕಾನ್ಪುರ, ಇಂದೋರ್, ಕೋಲ್ಕತ ಮೊದಲಾದ ಮಹಾ ನಗರಗಳಲ್ಲಿ ಬೃಹತ್ ಖಾದಿ ಉತ್ಪನ್ನ ತಯಾರಿಕಾ ಘಟಕಗಳ ಸ್ಥಾಪನೆಗೂ ಆಯೋಗ ಸಹಾಯ ಮಾಡಿದೆ. ಈ ಘಟಕಗಳು ತಮ್ಮದೇ ಬ್ರ್ಯಾಂಡ್​ನ ಖಾದಿ ಉತ್ಪನ್ನಗಳು ಅಮೆಜಾನ್, ಫ್ಲಿಪ್​ಕಾರ್ಟ್ ಮೊದಲಾದ ಆನ್​ಲೈನ್ ಮಾರುಕಟ್ಟೆಗಳಲ್ಲೂ ಲಭ್ಯವಾಗುವಂತೆ ನೋಡಿಕೊಂಡಿವೆ. ಈ ಎಲ್ಲದರ ಪರಿಣಾಮವೇ ಖಾದಿ ಉತ್ಪನ್ನಗಳ ಮಾರಾಟದ ತ್ವರಿತ ಬೆಳವಣಿಗೆ.

ರಫ್ತಿನಲ್ಲೂ ಹೆಚ್ಚಳ: ಆಯೋಗವು ಕಳೆದ ನಾಲ್ಕೈದು ವರ್ಷಗಳಿಂದ ಖಾದಿ ಉತ್ಪನ್ನಗಳ ರಫ್ತನ್ನು ಹೆಚ್ಚಿಸಿದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಭಾರತದ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೂ ಉಂಟಾಗಿದೆ. ಸರ್ಕಾರದ ಸಹಕಾರದೊಂದಿಗೆ ವಿದೇಶಗಳಲ್ಲೂ ಖಾದಿ ತನ್ನ ಛಾಪು ಮೂಡಿಸುತ್ತಿದೆ.

ಬ್ರ್ಯಾಂಡ್​ನ ರಕ್ಷಣೆ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಿಸ್ತರಣೆಗೆ ಮತ್ತೊಂದು ಕಾರಣವೆಂದರೆ, ಖಾದಿ ಬ್ರ್ಯಾಂಡ್​ನ ರಕ್ಷಣೆ. ಖಾಸಗಿ ಕಂಪನಿಗಳ ಬ್ರ್ಯಾಂಡೆಂಡ್ ಸರಕುಗಳ ಸರಿಸಮಾನವಾಗಿ ಖಾದಿ ತನ್ನ ಹೆಸರು ಮತ್ತು ಜನಪ್ರಿಯತೆಗಳನ್ನು ಉಳಿಸಿಕೊಂಡಿದೆ. ಕಳೆದ 5 ವರ್ಷಗಳಿಂದ ಮಾರುಕಟ್ಟೆ ತಂತ್ರಗಳನ್ನೂ ಬದಲಿಸಿಕೊಂಡಿದೆ ಹಾಗೂ ಖಾದಿ ಉತ್ಪನ್ನಗಳನ್ನು ‘ಖಾದಿ ಇಂಡಿಯಾ’ ಬ್ರ್ಯಾಂಡ್ ಹೆಸರಿನಡಿ ಮಾರಾಟ ಮಾಡುತ್ತಿದೆ. ಗ್ರಾಮೋದ್ಯೋಗಗಳ ಕಡೆ ಹೆಚ್ಚು ಗಮನಹರಿಸಿದೆ. 2013ರಲ್ಲಿ ಆಯೋಗವು ಖಾದಿ ಚಿಹ್ನೆಯನ್ನು ಶಾಸನಬದ್ಧಗೊಳಿಸುವ ಮೂಲಕ ಖಾಸಗಿ ಉತ್ಪಾದಕರು ಖಾದಿ ಚಿಹ್ನೆಯನ್ನು ಬಳಸದಂತೆ ನಿಯಂತ್ರಣ ಹೇರಿದೆ. 2014ರಿಂದ ಈ ಚಿಹ್ನೆಯನ್ನು ಖಾದಿ ಉತ್ಪನ್ನಗಳ ಅಂತಾರಾಷ್ಟ್ರೀಯ ಟ್ರೇಡ್​ವಾರ್ಕ್ ಆಗಿ ಬಳಸಲಾಗುತ್ತಿದೆ. ಖಾದಿ ಚಿಹ್ನೆಯನ್ನು ಬಳಸುತ್ತಿದ್ದ ಖಾಸಗಿ ಕಂಪನಿಗಳಾದ ಫ್ಯಾಬ್​ಇಂಡಿಯಾ ಮತ್ತು ಜರ್ಮನ್ ಮೂಲದ ಖಾದಿ ನೇಚರ್​ಪ್ರಾಡಕ್ಟ್ ಜಿಬಿಆರ್ ವಿರುದ್ಧ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯವನ್ನು ತನ್ನ ಪರವಾಗಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿಯೇ ಖಾದಿ ಬ್ರ್ಯಾಂಡ್ ರಕ್ಷಣೆಗೆ ಆಸಕ್ತಿ ವಹಿಸಿದ್ದಾರೆ. ಪ್ರತಿ ತಿಂಗಳ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ಆಗಮಿಸುವ ವಿದೇಶಿ ಅತಿಥಿಗಳಿಗೆ ಖಾದಿ ವಸ್ತ್ರಗಳನ್ನೇ ಉಡುಗೊರೆಯಾಗಿ ನೀಡುವ ಮೂಲಕ ಖಾದಿಯನ್ನು ಪ್ರಚಾರ ಮಾಡುತ್ತಿದ್ದಾರೆ. 2018ರ ಅಕ್ಟೋಬರ್​ನಲ್ಲಿ ಖಾದಿ ಉತ್ಪನ್ನಗಳ ಮಾರಾಟ ಸಾರ್ವತ್ರಿಕ ದಾಖಲೆ ಸೃಷ್ಟಿಸಿತ್ತು. ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ವಿ.ಕೆ.ಸಕ್ಸೇನಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದರು.

ವಿಸ್ತೃತ ವಿತರಣೆ: ಸರ್ಕಾರಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಖಾದಿ ಉತ್ಪನ್ನಗಳನ್ನು ಖಾದಿ ಭವನದ ಹೊರಗೆ ತಂದಿದ್ದೇ ಮಾರಾಟ ಹೆಚ್ಚಳಕ್ಕೆ ಮತ್ತೊಂದು ಕಾರಣ. ಕಳೆದ ಮೂರು ವರ್ಷಗಳಿಂದ ಆಯೋಗವು ಮಾರುಕಟ್ಟೆ ತಂತ್ರವನ್ನು ಬದಲಿಸಿದ್ದು, ದೊಡ್ಡ ದೊಡ್ಡ ಮಾಲ್​ಗಳು ಹಾಗೂ ಮುಕ್ತ ಮಾರುಕಟ್ಟೆಯಲ್ಲೂ ಖಾದಿ ಬ್ರ್ಯಾಂಡೆಡ್ ಉತ್ಪನ್ನಗಳು ದೊರೆಯುವಂತೆ ಮಾಡಲಾಯಿತು. ಅಲ್ಲದೆ, ಎಲ್ಲ ವಿದೇಶಿ ದೂತಾವಾಸ (ಎಂಬೆಸಿ) ಕಚೇರಿಗಳಿಗೂ ಖಾದಿ ಉತ್ಪನ್ನಗಳ ಸ್ಯಾಂಪಲ್​ಗಳನ್ನು ಕಳುಹಿಸಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಖಾದಿ ಇಂಡಿಯಾದ ಸೌಂದರ್ಯವರ್ಧಕ ಉತ್ಪನ್ನಗಳು, ನೈಸರ್ಗಿಕ ಉತ್ಪನ್ನಗಳು ಹಾಗೂ ಆಯುರ್ವೆದದ ಉತ್ಪನ್ನಗಳು ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ.

ಸೂತ್ರಧಾರ ಕೆವಿಐಸಿ

ಇದ್ದಕ್ಕಿದ್ದಂತೆ ಖಾದಿ ಮಾರುಕಟ್ಟೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎಂದರೆ, ಅದಕ್ಕೆ ಕಾರಣ ‘ರಾಷ್ಟ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ (ಖಾದಿ ಆಂಡ್ ವಿಲೇಜ್ ಇಂಡಸ್ಟ್ರೀಸ್ ಕಮಿಷನ್-ಕೆವಿಐಸಿ). ಗಾಂಧಿಯ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಸಂವಿಧಾನದ 23ನೇ ವಿಧಿಯಡಿ 1957ರಲ್ಲಿ ರಾಷ್ಟ್ರೀಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸ್ಥಾಪನೆಯಾಯಿತು. ಆರಂಭದಲ್ಲಿ ವೈಯಕ್ತಿಕ ಉದ್ದಿಮೆದಾರರು ಹಾಗೂ ಸಹಕಾರ ಸಂಘಗಳ ಮೂಲಕ ಗುಡಿ (ಖಾದಿ ಗ್ರಾಮೋದ್ಯೋಗ) ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದು ಇದರ ಮೂಲ ಉದ್ದೇಶವಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಅಧಿನಿಯಮ 1956 (ಕರ್ನಾಟಕ ಅಧಿನಿಯಮ 1957)ರಂತೆ 1957ರ ಸೆಪ್ಟೆಂಬರ್ 13ರಂದು ಶಾಸನಬದ್ಧ ಸ್ವಾಯತ್ತ ಹಾಗೂ ಲಾಭರಹಿತ ಸೇವಾ ಸಂಸ್ಥೆಯಾಗಿ ಸ್ಥಾಪನೆಯಾಯಿತು.

ತಿದ್ದುಪಡಿ: 1987-88ರಲ್ಲಿ ಕೆವಿಐಸಿ ಕಾಯ್ದೆ ಗೆ ತಿದ್ದುಪಡಿ ತದ್ದು ಗ್ರಾಮೀಣ ಕೈಗಾರಿಕೆಗಳಿಗೆ ವ್ಯಾಖ್ಯಾನ ನೀಡಲಾಯಿತು. ಆಯೋಗವು ಗ್ರಾಮೀಣ ಉದ್ಯಮಶೀಲರಿಗೆ ಹಾಗೂ ದೇಸಿ ಕರಕುಶಲ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಸಾಲದ ರೂಪದಲ್ಲಿ ಆರ್ಥಿಕ ಸಹಾಯ ಒದಗಿಸುವ ಜತೆಗೆ ಸಹಾಯಧನವನ್ನೂ ನೀಡುತ್ತಿದೆ. ಹೊಸದಾಗಿ ನೋಂದಾಯಿಸಿಕೊಂಡ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳನ್ನು ಆಯೋಗದ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ, ಉತ್ಪನ್ನಗಳ ಗುಣಮಟ್ಟವನ್ನು ಖಾತರಿಪಡಿಸುತ್ತಾರೆ.

ಪ್ಯಾಕೇಜಿಂಗ್ ಕಡೆಗೂ ಗಮನ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳು ಉತ್ಪಾದಿಸುವ ಉತ್ಪನ್ನಗಳು ಸಹಜವಾಗಿ ಪರಿಸರಸ್ನೇಹಿಯಾಗಿರುತ್ತವೆ. ಆರೋಗ್ಯಕರ, ಉತ್ಕೃಷ್ಟ ಗುಣಮಟ್ಟ ಹಾಗೂ ಜೀವನಾವಶ್ಯಕ ವಸ್ತುಗಳೆಲ್ಲವನ್ನೂ ಈ ಕ್ಷೇತ್ರದಲ್ಲಿ ಉತ್ಪಾದಿಸಲಾಗುತ್ತದೆ. ಇತ್ತೀಚೆಗೆ ಖಾದಿ ಉತ್ಪನ್ನಗಳು ಯುವಕರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ. ಖಾದಿ ಉದ್ಯಮ ಕೂಡ ಗ್ರಾಹಕರ ಆಕಾಂಕ್ಷೆಗಳನ್ನು ಅರಿತು ಸ್ಪಂದಿಸುತ್ತಿದೆ. ಯುವಜನತೆಯನ್ನು ಆಕರ್ಷಿಸುವ ವಿವಿಧ ವಿನ್ಯಾಸದ ಆಧುನಿಕ ಸಿದ್ಧ ಉಡುಪುಗಳನ್ನು ತಯಾರಿಸುತ್ತಿದೆ. ಖಾದಿ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರಕ್ಕೆ ಖಾದಿ ಮೇಳ, ವಸ್ತು ಪ್ರದರ್ಶನ, ಖಾದಿ ಉತ್ಸವಗಳಂತಹ ಹಲವಾರು ಸರಳ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸ್ಪರ್ಧಾತ್ಮಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ಅಪೇಕ್ಷೆಗಳಿಗೆ ಅನುಸಾರ ವಾಗಿ ಬ್ರ್ಯಾಂಡೆಡ್ ವಸ್ತುಗಳಿಗೆ ಸರಿಸಾಟಿಯಾದ ವಿನೂತನ ಮಾದರಿಯ ಪ್ಯಾಕಿಂಗ್ ತಂತ್ರ ವನ್ನೂ ಅಳವಡಿಸಿಕೊಂಡಿದೆ. ಎಲ್ಲ ಪ್ರಯತ್ನಗಳ ಫಲವಾಗಿ ಉದ್ಯಮ ತ್ವರಿತ ಬೆಳವಣಿಗೆ ಕಾಣುತ್ತಿದೆ.