ಹಾಸನ: ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವುದಕ್ಕಾಗಿ ಕೈಗೊಂಡಿರುವ ಎತ್ತಿನಹೊಳೆ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಏನೂ ಅರಿಯದಂತೆ ಸುಮ್ಮನಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಆರೋಪಿಸಿದರು.
ಪಶ್ಚಿಮಘಟ್ಟದ 600 ಎಕರೆ ಪ್ರದೇಶದಲ್ಲಿರುವ ಲಕ್ಷಾಂತರ ಮರಗಳನ್ನು ಕಡಿದು ಪೈಪ್ಲೈನ್ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಪರಿಸರ ಸಂರಕ್ಷಣೆಗಾಗಿ ಹಾಕಿಕೊಂಡಿದ್ದ ಯಾವ ನಿಯಮವನ್ನೂ ಅರಣ್ಯ ಇಲಾಖೆ ಹಾಗೂ ಕಾಮಗಾರಿ ಜವಾಬ್ದಾರಿ ಹೊತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮ ಪಾಲಿಸುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಕಾಮಗಾರಿ ಪ್ರದೇಶದಲ್ಲಿ ಇದುವರೆಗೆ 2 ಲಕ್ಷ ಮರಗಳನ್ನು ಕಡಿಯಲಾಗಿದೆ. ಆದರೆ, ಕೇವಲ 8 ಸಾವಿರವೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಾಶ ಮಾಡುವ ಪ್ರತಿ ಮರಕ್ಕೆ ಪರ್ಯಾಯವಾಗಿ 2 ಸಸಿ ನೆಡುವ ಹಾಗೂ 5 ವರ್ಷ ಪಾಲನೆ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ಇದುವರೆಗೆ ಸಸಿಗಳನ್ನು ನೆಟ್ಟಿಲ್ಲ.
ಹಸಿರು ಪೀಠದ ಅಧಿಕಾರಿಗಳು ಭೇಟಿ ನೀಡುವ ಪ್ರದೇಶದಲ್ಲಿ ಮಾತ್ರ ಸಸಿ ನೆಟ್ಟಿದ್ದಾರೆ. ಕಡಿಯುವ ಪ್ರತಿ ಮರಕ್ಕೆ ಗುತ್ತಿಗೆದಾರರು ಸರ್ಕಾರಕ್ಕೆ 200 ರೂ. ಪಾವತಿಸಬೇಕು. ಆದರೆ ಕೇವಲ 8 ಸಾವಿರ ಮರಗಳಿಗೆ ಹಣ ಪಾವತಿಸಿದ್ದು ಭಾರಿ ಮೋಸ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು ಸೂಕ್ತ ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಎರಡು ಲಕ್ಷ ಮರಗಳ ಹನನ:
ಹಿಂದನಹಳ್ಳಿಯಿಂದ ದೊಡ್ಡನಾಗರ ಗ್ರಾಮದವರೆಗೆ 60 ಸಾವಿರಕ್ಕೂ ಅಧಿಕ ಮರ ಕಡಿಯಲಾಗಿದ್ದು, ಸರ್ಕಾರಕ್ಕೆ 5 ಸಾವಿರ ಮರ ಕಡಿದಿರುವುದಾಗಿ ವರದಿ ನೀಡಲಾಗಿದೆ. ದೋಣಿಗಾಲ್ನಿಂದ ದೊಡ್ಡನಾಗರ ವ್ಯಾಪ್ತಿಯಲ್ಲಿ 25 ಸಾವಿರ ಮರ ಕಡಿದಿದ್ದರೂ ಸಾವಿರ ಮರ ಹನನ ಮಾಡಿರುವುದಾಗಿ ಹೇಳಿದ್ದಾರೆ. ಕಾಡುಮನೆ ವ್ಯಾಪ್ತಿಯಲ್ಲಿ 60 ಸಾವಿರ, ಮಾರನಹಳ್ಳಿಯಿಂದ ದೊಡ್ಡನಾಗರ ವ್ಯಾಪ್ತಿಯಲ್ಲಿ 35 ಸಾವಿರ ಮರ ಕಡಿದಿದ್ದರೂ ಕೇವಲ 2 ಸಾವಿರ ಮರ ಕಡಿದಿರುವ ಲೆಕ್ಕ ಕೊಟ್ಟಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದರು.
ಕಾಮಗಾರಿ ಪ್ರದೇಶದಲ್ಲಿ ಕಡಿದಿರುವ 2 ಲಕ್ಷ ಮರಗಳಿಗೆ 4 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಬೇಕಿತ್ತು. ಆದರೆ ಸರ್ಕಾರದ ನಿರ್ಲಕ್ಷೃದಿಂದ ಭಾರಿ ಅನ್ಯಾಯ ಮಾಡಲಾಗಿದೆ. ಸಣ್ಣ ಗಾತ್ರದ ಮರಗಳನ್ನು ನೆಲದಲ್ಲಿಯೇ ಹೂಳುತ್ತಿದ್ದಾರೆ. ದೊಡ್ಡ ಮರಗಳನ್ನು ಅಕ್ರಮವಾಗಿ ಮಂಗಳೂರು ಮಾರ್ಗವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದಾರೆ ಎಂದರು.
ನಾಡಿಗೆ ಕಾಡೆಮ್ಮೆ : ಹೆಗ್ಗದ್ದೆ ಸುತ್ತಲಿನ ಅರಣ್ಯ ಪ್ರದೇಶದಲ್ಲಿದ್ದ ಕಾಡೆಮ್ಮೆಗಳು ಅರಣ್ಯ ನಾಶದಿಂದಾಗಿ ನಾಡಿಗೆ ಪ್ರವೇಶಿಸುತ್ತಿವೆ. ಬೇಟೆಗಾರರು ಅವುಗಳನ್ನು ಕೊಂದು ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ. ಹಳ್ಳತೊರೆಗಳು ಸಂಪೂರ್ಣ ಬತ್ತಿದ್ದು ಕಾಡುಪ್ರಾಣಿಗಳು ಹನಿ ನೀರಿಗಾಗಿ ಪರಿತಪಿಸುತ್ತಿವೆ. ಕಾಡಾನೆಗಳಿಂದ ಭಾರಿ ಅನಾಹುತವಾಗುತ್ತಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರಿಸಿದರು.
ಸಕಲೇಶಪುರ ತಾಲೂಕಿನ ಕೊಡಚಳ್ಳಿ ಗ್ರಾಮ ಸಮೀಪ ‘ಜಪಾವತಿ’ ಎಂಬ ನದಿ ಉಗಮ ಸ್ಥಾನ ತನ್ನ ಸ್ವರೂಪ ಕಳೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎತ್ತಿನಹೊಳೆ ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಸರಿಯಾದ ಪರಿಹಾರವನ್ನೂ ನೀಡುತ್ತಿಲ್ಲ. ಈ ಸಂಬಂಧ ಅನೇಕ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದು ಯಾವುದನ್ನೂ ಲೆಕ್ಕಿಸದೆ ಭೂಮಿ ಅಗೆಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಆರಂಭದಿಂದಲೂ ಎತ್ತಿನಹೊಳೆ ಕಾಮಗಾರಿಯನ್ನು ತಾತ್ಸಾರದಿಂದ ಕಂಡಿದೆ. ಚುನಾವಣಾ ಸಂದರ್ಭ ಮಾತ್ರ ಸಕಲೇಶಪುರ ಪ್ರವಾಸ ಮಾಡುವ ಜೆಡಿಎಸ್ನವರಿಗೆ ಮಲೆನಾಡಿಗರ ಸಮಸ್ಯೆ ಅರ್ಥವಾಗುತ್ತಿಲ್ಲ. 60 ವರ್ಷಗಳಿಂದ ಜಿಲ್ಲೆಯಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ನವರು ಪಶ್ಚಿಮಘಟ್ಟ ಉಳಿವಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದರು.
ಹಾಸನ ಜಿಲ್ಲೆಯನ್ನು ಚಿನ್ನದ ನಾಡು ಮಾಡುವುದಾಗಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರು ಮಲೆನಾಡು ಕಡೆಗೆ ಗಮನ ಹರಿಸಬೇಕು. ಎತ್ತಿನಹೊಳೆ ಯೋಜನೆಯಲ್ಲಾಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಒತ್ತಾಯಿಸಿದರು
ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಇದ್ದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಸಾಧಿಸಿದ ಕೂಡಲೇ ಅದರ ಶ್ರೇಯಸ್ಸು ಪಡೆಯಲು ಅವಿರತ ಶ್ರಮಪಟ್ಟ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಪಶ್ಚಿಮ ಘಟ್ಟದ ಉಳಿವು ಮಾತ್ರ ಬೇಕಿಲ್ಲ.
ಎಚ್.ಎಂ. ವಿಶ್ವನಾಥ್, ಮಾಜಿ ಶಾಸಕ