ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದಿನ ಆಡಳಿತದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅದನ್ನು ನನ್ನ ಅವಧಿಯಲ್ಲಿ ಸರಿಪಡಿಸುವ ವಿಶ್ವಾಸವಿದೆ. ಅದು ಸಾಧ್ಯವಾಗದಿದ್ದರೆ ನಾನು ಕುಲಪತಿಯಾಗಿರಲು ಅರ್ಹನಲ್ಲ ಎಂದೇ ಭಾವಿಸಬೇಕಾಗುತ್ತದೆ ಎಂದು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ವಿವಿ ಮೇಲಿರುವ ಆರೋಪಗಳನ್ನು ನಾನು ನಿರಾಕರಿಸುವುದಿಲ್ಲ. ಜತೆಗೆ ದೂರು ಅಥವಾ ಆರೋಪಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ನ್ಯಾಷನಲ್ ರೀಸರ್ಚ್ ಫೌಂಡೇಶನ್‌ನ ರ‌್ಯಾಂಕಿಂಗ್‌ನಲ್ಲಿ ಕುವೆಂಪು ವಿವಿ 150ನೇ ಸ್ಥಾನದಲ್ಲಿದೆ. ಎಂ.ಇಡಿಗೆ ಪ್ರವೇಶಾತಿ ಇಲ್ಲ. ಇದು ಒಂದು ವಿಭಾಗದ ಸಮಸ್ಯೆಯಲ್ಲ. ಪದವಿಯ ಎಲ್ಲ ಕೋರ್ಸ್‌ಗಳ ಪ್ರವೇಶಾತಿಯೂ ಕಡಿಮೆಯಾಗಿದೆ. ಹಾಗಾಗಿ ಪದವಿ ಕೋರ್ಸ್‌ಗಳ ಬಗ್ಗೆ ಗಾಢವಾಗಿ ಯೋಚಿಸುವ ಪರಿಸ್ಥಿತಿ ಇದೆ. ಈ ಹಿಂದೆ ಭೌತಶಾಸ್ತ್ರಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ಭೌತಶಾಸ್ತ್ರಕ್ಕೂ ಪ್ರವೇಶಾತಿ ಕಡಿಮೆಯಾಗಿದೆ. ಎನ್‌ಇಪಿ ಸಮಸ್ಯೆಯಿಂದ ಪ್ರವೇಶಾತಿಗಳು ವಿವಿಗಳಲ್ಲಿ ಕಡಿಮೆಯಾಗಿವೆ ಎಂದು ಹೇಳಿದರು.
ವಿವಿಯಲ್ಲಿದ್ದ ಅಂಕಪಟ್ಟಿ ಸಮಸ್ಯೆ ಬಗೆಹರಿಸಲಾಗಿದೆ. ಅಂಕಪಟ್ಟಿಗಾಗಿ ವಿದ್ಯಾರ್ಥಿಗಳ ಪರದಾಟ ಬಹುತೇಕ ಬಗೆಹರಿಸಲಾಗಿದೆ. 15 ದಿನಗಳಲ್ಲಿ ಕಾಲೇಜುಗಳಲ್ಲಿ ಅಂಕಪಟ್ಟಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ವಿವಿಯಲ್ಲಿ ಆರ್ಥಿಕ ಶಕ್ತಿ ವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಗ್ರೀನ್ ಎನರ್ಜಿ ಹಾಗೂ ಸೋಲಾರ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದು ಸಾಧ್ಯವಾದರೆ ಇಡೀ ರಾಷ್ಟ್ರದಲ್ಲಿ ಕುವೆಂಪು ವಿವಿ ಮಾದರಿಯಾಗಲಿದೆ ಎಂದರು.