ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ಕಾರ್ಗಲ್: ಮಂಗನ ಕಾಯಿಲೆಯಿಂದ ಮೃತಪಟ್ಟ ಮರಬಿಡಿ ಗ್ರಾಮದ ಲೋಕರಾಜ್ ಜೈನ್ ಶವವನ್ನು ಅರಳಗೋಡು ಗ್ರಾಪಂ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಾಯಿಲೆ ನಿಯಂತ್ರಣಕ್ಕೆ ಆಗ್ರಹಿಸಿ ತಹಸೀಲ್ದಾರ್ ಹಾಗೂ ಜಿಪಂ ಸದಸ್ಯ ರಾಜಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಪ್ರಮುಖ ಮಹಾಬಲಗಿರಿ ಅರಳಗೋಡು ಮಾತನಾಡಿ, ಕಾಯಿಲೆಯಿಂದ ದಾಖಲಾಗುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಶರಾವತಿ ಅಭಯಾರಣ್ಯದಲ್ಲಿ ಮೃತಪಟ್ಟ ಮಂಗಗಳನ್ನು ಕೊಳೆಯುವ ಮುಂಚಿತವಾಗಿ ಪತ್ತೆ ಹಚ್ಚಿ ಸುಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದರು.

ಈಗಾಗಲೆ ಮಂಗನ ಕಾಯಿಲೆಯಿಂದ ಅರಳಗೋಡು ವ್ಯಾಪ್ತಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಬೇಕು. ತೀವ್ರ ಜ್ವರದಿಂದ ಅಸ್ವಸ್ಥರಾಗಿರುವ 10 ಜನರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗನ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುವ ಎಲ್ಲ ರೋಗಿಗಳಿಗೂ 5 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದರು.

ತಾಪಂ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ್ ಮಾತನಾಡಿ, ಒಬ್ಬ ವ್ಯಕ್ತಿ ಕಾಡಿನ ಪ್ರವೇಶ ಮಾಡಿದರೆ ಪತ್ತೆ ಹಚ್ಚುವ ಶರಾವತಿ ಅಭಯಾರಣ್ಯದ ಅಧಿಕಾರಿಗಳು ಕಾಡಿನಲ್ಲಿ ಸತ್ತ ಮಂಗಗಳ ಬಗ್ಗೆ ಅರಿಯಲು ಸಾಧ್ಯವಿಲ್ಲವೇ? ಉಣ್ಣೆಗಳನ್ನು ನಾಶಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಜಿಪಂ ಸದಸ್ಯ ರಾಜಶೇಖರ ಗಾಳಿಪುರ ಮಾತನಾಡಿ, ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ವನ್ಯಮೃಗಗಳಿಂದ ದಾಳಿಯಾದಾಗ ಜನತೆಗೆ ಅರಣ್ಯ ಇಲಾಖೆಯು ಪರಿಹಾರ ಒದಗಿಸುವ ರೀತಿಯಲ್ಲೇ ಇಂತಹ ಪ್ರಕರಣಗಳನ್ನು ಪರಿಗಣಿಸಿದಲ್ಲಿ ಅರಣ್ಯ ಇಲಾಖೆಯು 5 ಲಕ್ಷ ರೂ.ವರೆಗೆ ಪರಿಹಾರ ನೀಡಲು ಅವಕಾಶವಿದೆ ಎಂದರು.

ತಹಶೀಲ್ದಾರ್ ರಶ್ಮಿ, ತಾಪಂ ಸದಸ್ಯೆ ಪ್ರಭಾವತಿ ಚಂದ್ರಕಾಂತ್, ಗ್ರಾಪಂ ಅಧ್ಯಕ್ಷೆ ಶ್ರೀಲಕ್ಷ್ಮೀ ಇತರರಿದ್ದರು.

ಸೂಕ್ತ ಚಿಕಿತ್ಸೆಗೆ ಮನವಿ: ಸಾಗರ: ಮಂಗನ ಕಾಯಿಲೆಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅರಳಗೋಡು ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಉಲ್ಭಣಗೊಂಡಿದ್ದು, ಈಗಾಗಲೆ ಮೂವರು ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ಜನರು ಸಾಗರ, ಶಿವಮೊಗ್ಗ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗನ ಕಾಯಿಲೆ ದಿನೇದಿನೆ ಹರಡುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ತ್ವರಿತ ಕಾರ್ಯಕ್ರಮ ಆಯೋಜಿಸಬೇಕಿದೆ. ಅರಳಗೋಡು ವ್ಯಾಪ್ತಿಯಲ್ಲಿ ತೀವ್ರ ನಿಗಾ ಘಟಕ ಸ್ಥಾಪಿಸಬೇಕು. ಘಟಕಕ್ಕೆ ನುರಿತ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಲಾಗಿದೆ.

ಈಗಾಗಲೆ ಮಂಗನ ಕಾಯಿಲೆಯಿಂದ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಗಳು ಕುಟುಂಬದ ಆಧಾರಸ್ತಂಭ. ಕುಟುಂಬವು ಬೀದಿಪಾಲಾಗುವ ಸ್ಥಿತಿ ಎದುರಿಸುತ್ತಿದೆ. ಮೃತ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು. ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ತಾಪಂ ಸದಸ್ಯೆ ಪ್ರಭಾವತಿ, ಗ್ರಾಮಸ್ಥರಾದ ಚಂದ್ರಕಾಂತ್, ಲಿಂಗರಾಜ್ ಆರೋಡಿ, ತ್ಯಾಗರಾಜ್ ಇತರರಿದ್ದರು.