ಬೆಂಗಳೂರು: ಪಾಲಿಕೆಯ ಪಶ್ಚಿಮ ವಲಯದ ಯಶವಂತಪುರ ಆರ್‌ಟಿಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿರುವ 32 ಮಳಿಗೆಗಳು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಅವುಗಳಿಗೆ ಸೋಮವಾರ ಬೀಗ ಮುದ್ರೆ ಹಾಕಲಾಯಿತು.
ಬಿಬಿಎಂಪಿ ಕಾಯ್ದೆ 2020 ಹಾಗೂ ನಿಯಮಾವಳಿ ಅನ್ವಯ, ವಾಣಿಜ್ಯೇತರ ಆಸ್ತಿಗಳಿಗೆ ಬೀಗಮುದ್ರೆ ಹಾಕುವ ಮೂಲಕ ಬಾಕಿ ಆಸ್ತಿತೆರಿಗೆ ವಸೂಲಿ ಮಾಡುವಲ್ಲಿ ಪಶ್ಚಿಮ ವಲಯದಲ್ಲಿ ವಿಶೇಷ ಅಭಿಯಾನ ಕೈಗೊಳ್ಳಾಗಿದೆ. ಮತ್ತಿಕೆರೆ ಸಹಾಯಕ ಕಂದಾಯ ಅಧಿಕಾರಿ ಉಪವಿಭಾಗದಲ್ಲಿನ ಸ್ವತ್ತುಗಳಲ್ಲಿ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಲ್ಲಿ ಅತೀ ಹೆಚ್ಚು ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದರಿಂದ ಅಂತಹ ಸ್ವತ್ತಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ವಲಯ ಆಯುಕ್ತ ಅರ್ಚನಾ ತಿಳಿಸಿದ್ದಾರೆ.
ವಸತಿಯೇತರ ಉಪಯೋಗ ಮಾಡುತ್ತಿರುವ ಮೆ. ಮೊಹಮ್ಮದ್ ಷರೀಫ್ ಎಜುಕೇಷನ್ ಟ್ರಸ್ಥ್‌ಗೆ ಸೇರಿದ 32 ಸ್ವತ್ತುಗಳಿಗೆ ವಲಯ ಆಯುಕ್ತರು, ಜಂಟಿ ಆಯುಕ್ತರು ಬೀಗ ಹಾಕಿದರು.
ಸ್ವತ್ತಿನ ಮಾಲೀಕರು ಇಲ್ಲಿಯವರೆಗೆ 2016-17 ಮತ್ತು 2017-18ನೇ ಸಾಲಿಗೆ ಆಸ್ತಿತೆರಿಗೆ ಪಾವತಿಸಿ ಉಳಿದ ಸಾಲುಗಳಿಗೆ ಪರಿಷ್ಕರಿಸಿದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಸದ್ಯ ಈವರೆಗೆ ಒಟ್ಟು 1.51 ಕೋಟಿ ರೂ. ತೆರಿಗೆ ಬಾಕಿ ಪಾವತಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಜಂಟಿ ಆಯುಕ್ತ ಸಂಗಪ್ಪ, ಉಪ ಆಯುಕ್ತ ಶ್ರೀನಿವಾಸ್, ಮಲ್ಲೇಶ್ವರ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಉಪಸ್ಥಿತರಿದ್ದರು.