ಬೆಳಗಾವಿ: ಅಭಿವೃದ್ಧಿ ವಿಷಯಗಳ ಕುರಿತು ಮಾಹಿತಿ ಪಡೆಯಲು ಅಧ್ಯಯನ ಹೆಸರಿನಲ್ಲಿ ಮಹಾನಗರ ಪಾಲಿಕೆ ಸದಸ್ಯರು ಪಂಜಾಬ ರಾಜ್ಯದ ಚಂಡೀಗಢ ಪ್ರವಾಸಕ್ಕೆ ತೆರಳುತ್ತಿರುವ ಯೋಜನೆಗೆ ಅಪಸ್ಪರ ಕೇಳಿಬರುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗಮನ ಸೆಳೆದಿರುವ ಚಂಢೀಗಢ ನಗರದಲ್ಲಿ ಯೋಜನೆಗಳ ಅನುಷ್ಠಾನ, ಘನ ತ್ಯಾಜ್ಯ ವಿಲೇವಾರಿ, ನಗರ ಅಭಿವೃದ್ಧಿ ವಿಷಯಗಳ ಕುರಿತು ಸದಸ್ಯರು, ಅಧಿಕಾರಿಗಳ ಅಧ್ಯಯನ ಪ್ರವಾಸ ಕೈಗೊಳ್ಳಲು ಪಾಲಿಕೆ ಆಯುಕ್ತರು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಷರತ್ತು ವಿಧಿಸಿ ಅನುಮತಿ ನೀಡಿದೆ.
ಕಳೆದ ಎರಡು ದಶಕಗಳಿಂದ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಅಭಿವೃದ್ಧಿ ವಿಷಯಗಳ ಕುರಿತು ಅಧ್ಯಯನ ಹೆಸರಿನಲ್ಲಿ ಪ್ರತಿ ವರ್ಷ ದೇಶದ ವಿವಿಧ ಮಹಾನಗರಗಳಿಗೆ ಭೇಟಿ ನೀಡಿ ಬರುತ್ತಿದ್ದಾರೆ. ಅಧ್ಯಯನ ಹೆಸರಿನಲ್ಲಿ ಕೋಟ್ಯಂತರ ರೂ. ವ್ಯಯಿಸಲಾಗಿದೆಯಾದರೂ ಅಧ್ಯಯನ ಮಾಡಿದ ವಿಷಯಗಳನ್ನು ಬೆಳಗಾಔಇ ನಗರ ಅಭಿವೃದ್ಧಿಯಲ್ಲಿ ಬಳಕೆ ಮಾಡಿರುವುದು ಮಾತ್ರ ಅಪರಪ. ಆ ಕುರಿತು ಸಲಹೆ-ಸೂಚನೆ ನೀಡಿದ ನಿದರ್ಶನಗಳೂ ದಾಖಲಾಗಿಲ್ಲವಾದ್ದರಿಂದ ಅಧ್ಯಯನ ಪ್ರವಾಸ ಕುರಿತು ಪರ-ವಿರೋಧ ವ್ಯಕ್ತವಾಗುತ್ತಿದೆ.
ತಜ್ಞರಿಂದ ಕಾರ್ಯಾಗಾರ ಏರ್ಪಡಿಸಿ : ಬೆಳಗಾವಿ ನಗರದಲ್ಲಿ ಅನುಷ್ಠಾನಗೊಂಡಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಈವರೆಗೂ ಪಾಲಿಕೆ ಸದಸ್ಯರು ಪರಿಶೀಲನೆ ನಡೆಸಿಲ್ಲ. ಅವೈಜ್ಞಾನಿಕವಾಗಿ ಅನುಷ್ಠಾನಗೊಂಡಿರುವ ಕಾಮಗಾರಿಗಳನ್ನು ಸಾರ್ವಜನಿಕವಾಗಿ ವಿರೋಧಿಸುವ ಕೆಲಸ ಆಗಿಲ್ಲ. ಹೊಸ ಯೋಜನೆಗಳಿಗಾಗಿ ಸಾಲುಸಾಲು ಮರ ಕಡಿದು ಪರಿಸರ ಹಾಳು ಮಾಡಿದರೂ ಧ್ವನಿ ಎತ್ತಿಲ್ಲ. ನಗರ ತ್ಯಾಜ್ಯ ನೀರು ಬಳ್ಳಾರಿ ನಾಲಾ ಸೇರಿ ಕೃಷಿ ಜಮೀನಿನಲ್ಲಿ ಹರಿಯುತ್ತಿದ್ದರೂ ಪ್ರಶ್ನಿಸುವ ಪ್ರಯತ್ನ ಇಂದಿಗೂ ಆಗಿಲ್ಲ. ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ ಅಪೂರ್ಣವಿದ್ದರೂ ಕೇಳುವ ಕೆಲಸ ಆಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳ ಅಧ್ಯಯನ ಪ್ರವಾಸ ಯಾವ ಪುರುಷಾರ್ಥಕ್ಕೆ ಎಂದು ಸ್ವತಃ ಪಾಲಿಕೆ ಸದಸ್ಯರು ಪ್ರಶ್ನಿಸುತ್ತಿದ್ದಾರೆ. ಅನವಶ್ಯಕ ಖರ್ಚು ಮಾಡುವ ಬದಲಿಗೆ ತಜ್ಞರನ್ನೆ ಬೆಳಗಾವಿಗೆ ಕರೆಯಿಸಿ ಕಾರ್ಯಾಗಾರ ಏರ್ಪಡಿಸುವುದು ಸೂಕ್ತವಾದ್ದರಿಂದ ಸರ್ಕಾರ ಅಧ್ಯಯನ ಪ್ರವಾಸದ ಅನುಮತಿ ಮರಳಿ ಪಡೆಯಲಿ ಎಂದು ಪಾಲಿಕೆ ಮಾಜಿ ಸದಸ್ಯರು, ಹೋರಾಟಗಾರರು ಆಗ್ರಹಿಸಿದ್ದಾರೆ.
80ಜನರ ತಂಡ: ಅಧ್ಯಯನ ಪ್ರವಾಸಕ್ಕೆ 2024-25ನೇ ಬಜೆಟ್‌ನಲ್ಲಿ 30 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಐವರು ನಾಮನಿರ್ದೇಶಿತರು, 58 ಪಾಲಿಕೆ ಸದಸ್ಯರು, ಅಧಿಕಾರಿಗಳು, ಮಹಿಳಾ ಸದಸ್ಯೆಯರ ಪತಿಗಳೂ ಸೇರಿ 80 ಜನ ಅಧ್ಯಯನ ಪ್ರವಾಸಕ್ಕೆ ಹೋಗಲು ಸಜ್ಜಾಗಿದ್ದಾರೆ.
ಶಾಸಕರ ಮಾತು ಮರೆತ ಸದಸ್ಯರು ಜಿದ್ದಾಜಿದ್ದಿಯಿಂದ ಕೂಡಿದ್ದ ಮಹಾನಗರ ಪಾಲಿಕೆ ಚುನಾವಣೆ ಗೆದ್ದ ಸಂದರ್ಭದಲ್ಲಿ ‘ಸಾರ್ವಜನಿಕ ತೆರಿಗೆ ಹಣದಲ್ಲಿ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳುವುದಿಲ’ ಎಂದು ಶಾಸಕ ಅಭಯ ಪಾಟೀಲ ಮಾತು ಕೊಟ್ಟಿದ್ದರು. ಈಗ ಶಾಸಕರ ಮಾತು ಮೀರಿ ಪ್ರವಾಸ ಕೈಗೊಳ್ಳುತ್ತಿರುವುದಕ್ಕೆ ಸದಸ್ಯರಲ್ಲಿಯೇ ವಿರೊಧ ವ್ಯಕ್ತವಾಗುತ್ತಿದೆ.
ವಿಮಾನದಲ್ಲಿ ಅಧ್ಯಯನ ಪ್ರವಾಸ!
ಅಧ್ಯಯನ ಪ್ರವಾಸಕ್ಕೆ ಬೆಳಗಾವಿ ನಗರದಿಂದ ರಸ್ತೆ, ರೈಲ್ವೆ ಅಥವಾ ವಿಮಾನ ಮೂಲಕ ಹೋಗಬೇಕು ಎನ್ನುವ ಕುರಿತೂ ಚರ್ಚೆ ಜೋರಾಗಿದ್ದಿ. ವಿಮಾನ ಪ್ರವಾಸದ ಆಯ್ಕೆಗೆ ಹೆಚ್ಚಿನ ಸದಸ್ಯರು ಆಸಕ್ತಿ ತೋರಿಸಿದ್ದಾರೆ. ಹೆಚ್ಚಿನ ಖರ್ಚು ಎದುರಾದರೆ ವಾರ್ಡ್ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಬಳಕೆಗೂ ಸಲಹೆ ಮುಂದಿಟ್ಟಿದ್ದಾರೆ.
ಅಭಿವೃದ್ಧಿ ಅಧ್ಯಯನ ಪ್ರವಾಸ ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದೆಯಾದರೂ ದಿನಾಂಕ, ಸ್ಥಳ ನಿಗದಿಯಾಗಿಲ್ಲ.
| ಶುಭ. ಬಿ. ಪಾಲಿಕೆ ಆಯುಕ್ತ